
Chikkaballapur : ಚಿಕ್ಕಬಳ್ಳಾಪುರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆ.ಸಿ. ವ್ಯಾಲಿ ಮತ್ತು ಎಚ್.ಎನ್. ವ್ಯಾಲಿ ನೀರಾವರಿ ಯೋಜನೆಗಳ ಕುರಿತಾಗಿ ಸೂಕ್ಷ್ಮ ಚರ್ಚೆಗಳು ನಡೆಯಿತು.
ಕೃಷಿಗೆ ಬಳಸಬೇಡಿ – ಶುದ್ಧೀಕರಣದ ಬಗ್ಗೆ ಸಚಿವರು ಎಚ್ಚರಿಕೆ
“ಈ ಯೋಜನೆಯ ನೀರಿನಿಂದ ಬೆಳೆದ ಹಣ್ಣು–ತರಕಾರಿಗಳ ಗುಣಮಟ್ಟವನ್ನು ಪರೀಕ್ಷಿಸಬೇಕು. ಮೂರನೇ ಹಂತದ ಶುದ್ಧೀಕರಣ ಪ್ರಕ್ರಿಯೆ ಸುಲಭದದು ಅಲ್ಲ. ದುಬಾರಿ ವ್ಯಯವಾಗಿದೆ. ಈ ನೀರನ್ನು ಕೃಷಿಗೆ ಬಳಸದೆ ಅಂತರ್ಜಲ ಮಟ್ಟ ಹೆಚ್ಚಿಸಲು ಮಾತ್ರ ಉಪಯೋಗಿಸಬೇಕು,” ಎಂದು ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ರಾಸುಗಳ ಮೇಲೆ ಪ್ರಭಾವ?
ಶಿಡ್ಲಘಟ್ಟ ಶಾಸಕ ಬಿ.ಎನ್. ರವಿಕುಮಾರ್ ಮಾತನಾಡಿ, “ಈ ನೀರನ್ನು ಸೇವಿಸಿ ರಾಸುಗಳ ಹಾಲಿನ ಇಳಿಕೆ ಹಾಗೂ ಸಂತಾನ ಸಮಸ್ಯೆ ಉಂಟಾಗಿದೆ ಎಂಬ ಶಂಕೆ ಇದೆ,” ಎಂದು ಹೇಳಿದರು. ಈ ಹೇಳಿಕೆಗೆ ಪ್ರತಿಯಾಗಿ ಸಚಿವರು ನಗುತ್ತಾ, “ನೀವು ಹೀಗೆ ಹೇಳಿದರೆ ನಮ್ಮ ಜಿಲ್ಲೆಗೆ ಯಾರೂ ಹೆಣ್ಣು ಕೊಡೋದೆ ಇಲ್ಲ,” ಎಂದು ಉತ್ತರಿಸಿದರು.
ನೀರಿನ ಗುಣಮಟ್ಟ ಪರೀಕ್ಷೆ
ಕಂದವಾರ, ಮುಷ್ಟೂರು, ಅಮಾನಿಗೋಪಾಲಕೃಷ್ಣ ಕೆರೆಗಳಿಗೆ ಮಲಮಿಶ್ರಿತ ನೀರು ಸೇರುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ, ನೀರಿನ ಗುಣಮಟ್ಟವನ್ನು ತಪಾಸಣೆ ಮಾಡಲು ಸೂಚನೆ ನೀಡಲಾಯಿತು. ಈ ಭಾಗದಲ್ಲಿ ಕುಡಿಯುವ ನೀರಿಗೂ ಪರಿಣಾಮವಿರುವ ಸಂಭವ ಇದೆ.
ಸಂಸದ ಎಂ. ಮಲ್ಲೇಶ್ ಬಾಬು ರಸಗೊಬ್ಬರ ಮಾರಾಟದ ದರ ಪಟ್ಟಿಯನ್ನು ಮಳಿಗೆಯಲ್ಲಿ ಪ್ರದರ್ಶಿಸುತ್ತಿಲ್ಲ ಎಂಬುದು ಗಂಭೀರ ವಿಷಯವೆಂದು ಹೇಳಿದರು. ಸಭೆಯಲ್ಲಿ ಹನಿ ನೀರಾವರಿ ಪೈಪ್‌ಗಳು, ಕೃಷಿ ಹೊಂಡಗಳ ಸುತ್ತ ಬೇಲಿ ಸೇರಿದಂತೆ ರೈತರಿಗೆ ಸಂಬಂಧಿಸಿದ ವಿವಿಧ ವಿಷಯಗಳೂ ಚರ್ಚೆಗೆ ಬಂದವು.
ರೇಷ್ಮೆ ಮಾರುಕಟ್ಟೆಯಲ್ಲಿ ಗೂಡು ಆವಕ ಕುಂಠಿತ
ಶಿಡ್ಲಘಟ್ಟ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಈಗ ನಿತ್ಯವಾಗಿ ಕೇವಲ 400 ಲಾಟ್ ಗೂಡಿನ ಆವಕವಾಗುತ್ತಿದೆ. ಇದಕ್ಕೆ ಕಾರಣಗಳ ತಿಳಿಯಲು ರೈತರ ಹಾಗೂ ರೀಲರ್‌ಗಳ ಸಭೆ ಏರ್ಪಡಿಸಲು ಸೂಚಿಸಲಾಯಿತು. “₹200 ಕೋಟಿ ವೆಚ್ಚದಲ್ಲಿ ಹೈಟೆಕ್ ರೇಷ್ಮೆಗೂಡು ಮಾರುಕಟ್ಟೆ ನಿರ್ಮಿಸುತ್ತಿದ್ದೇವೆ. ಆದರೆ ಗೂಡು ಕಡಿಮೆಯಾದರೆ ಮಾರುಕಟ್ಟೆಯಿಂದ ಉಪಯೋಗವೇನು?” ಎಂದು ಸಚಿವರು ಪ್ರಶ್ನಿಸಿದರು.
ರಾಸುಗಳ ಸಂಖ್ಯೆಯಲ್ಲಿ ಇಳಿಕೆ
ಜಿಲ್ಲೆಯಲ್ಲಿ ಪಶುಗಳ ಸಂಖ್ಯೆಯಲ್ಲಿ ಶೇ. 20ರಷ್ಟು ಇಳಿಕೆ ಕಂಡುಬಂದಿದೆ. ಹೋರಿಗಳು, ಎತ್ತುಗಳು ಕಡಿಮೆ ಆಗಿದ್ದು, ಕುರಿ, ಮೇಕೆ, ಕೋಳಿಗಳ ಸಂಖ್ಯೆ ಮಾತ್ರ ಹೆಚ್ಚಾಗಿದೆ ಎಂದು ಪಶುಸಂಗೋಪನಾ ಇಲಾಖೆ ತಿಳಿಸಿದೆ.
ಶಾಸಕರು ಎಸ್.ಎನ್. ಸುಬ್ಬಾರೆಡ್ಡಿ, ಕೆ.ಎಚ್. ಪುಟ್ಟಸ್ವಾಮಿ ಗೌಡ, ಜಿಲ್ಲಾ ಪಂಚಾಯತ್ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಎಸ್‌ಪಿ ಕುಶಾಲ್ ಚೌಕ್ಸೆ, ಡಿಸಿ ಪಿ.ಎನ್. ರವೀಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
The post ಪ್ರಗತಿ ಸಭೆಯಲ್ಲಿ ಕೆ.ಸಿ. ವ್ಯಾಲಿ, ಎಚ್.ಎನ್. ವ್ಯಾಲಿ ಚರ್ಚೆ ಗಂಭೀರ ತಿರುವು appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.