
ಆಸ್ಟ್ರೇಲಿಯಾದ ಮೇಲ್ಬೋರ್ನ್ನಲ್ಲಿ ಇದೇ ತಿಂಗಳು 16ರಂದು ಆರಂಭವಾಗಲಿರುವ ಪ್ರತಿಷ್ಠಿತ ಎಫ್1 ರೇಸಿಗೆ (F1 Race) ಕರ್ನಾಟಕದ ರೇಸರ್ ಆಯ್ಕೆಯಾಗಿದ್ದಾರೆ. 13 ವರ್ಷಗಳ ಬಳಿಕ ಭಾರತದಿಂದ ಒಬ್ಬ ರೇಸರ್ ಎಫ್1ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, ಇದು ದೇಶ ಮತ್ತು ರಾಜ್ಯಕ್ಕೆ ಹೆಮ್ಮೆಯ ವಿಷಯ.
ಬೆಂಗಳೂರಿನ 24 ವರ್ಷದ ಕುಶ್ ಮೈನಿ, (Kush Maini) ಪ್ರಸ್ತುತ ಫಾರ್ಮುಲಾ 2 ಸ್ಪರ್ಧಿಯಾಗಿದ್ದು, ಅಲ್ಫೈನ್ (Alpine) ತಂಡದ ಮೀಸಲು ಚಾಲಕರಾಗಿ ಆಯ್ಕೆ ಆಗಿದ್ದಾರೆ. 2023ರಲ್ಲಿ ಜೂನಿಯರ್ ಪ್ರೋಗ್ರಾಮ್ ಮೂಲಕ ಅಲ್ಪೈನ್ ತಂಡಕ್ಕೆ ಸೇರ್ಪಡೆಯಾದ ಮೈನಿಯನ್ನು ಇದೀಗ ಮೀಸಲು ಚಾಲಕರಾಗಿ ನೇಮಕ ಮಾಡಲಾಗಿದೆ. ಅವರು ಫ್ರಾಂಕೊ ಕೊಲಾಪಿಂಟೊ, ಪಾಲ್ ಅರೋನ್, ಮತ್ತು ರ್ಯೊ ಹಿರಕಾವಾ ಅವರೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ.
ಅಲ್ಫೈನ್ ತಂಡ ನೀಡಿದ ಹೇಳಿಕೆಯ ಪ್ರಕಾರ, ಕುಶ್ ಮೈನಿ ಅವರು ಟೆಸ್ಟ್ ಮತ್ತು ರಿಸರ್ವ್ ಚಾಲಕರಾಗಿ ಕಾರ್ಯನಿರ್ವಹಿಸಲಿದ್ದು, ಕಾರಿನ ಅಭಿವೃದ್ಧಿ ಹಾಗೂ ಸೆಟಪ್ ಬಗ್ಗೆ ಕೆಲಸ ಮಾಡಲಿದ್ದಾರೆ. ಮೈನಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, “ಈ ಋತುವಿನಲ್ಲಿ ಅಲ್ಪೈನ್ ಫಾರ್ಮುಲಾ 1 ತಂಡದ ಟೆಸ್ಟ್ ಮತ್ತು ರಿಸರ್ವ್ ಡ್ರೈವರ್ ಆಗಿ ಸೇವೆ ಸಲ್ಲಿಸುತ್ತಿರುವುದು ಸಂತೋಷ ತಂದಿದೆ” ಎಂದು ಹೇಳಿದ್ದಾರೆ.
ಈ ಹಿಂದೆ ನರೇನ್ ಕಾರ್ತಿಕೇಯನ್ ಮತ್ತು ಕರುಣ್ ಚಾಂದೋಕ್ ಎಫ್1 ರೇಸರ್‌ಗಳಾಗಿದ್ದು, ಕುಶ್ ಮೈನಿ ಈಗ ಭಾರತದಿಂದ ತೃತೀಯ ಎಫ್1 ಸ್ಪರ್ಧಿಯಾಗಿದ್ದಾರೆ.