
Israel: ಕದನ ವಿರಾಮ ಒಪ್ಪಂದದ ಪ್ರಕಾರ, ಬುಧವಾರ ಇಸ್ರೇಲ್ 643 ಬಂಧಿತ ಪ್ಯಾಲೆಸ್ತೀನ್ (Palestinians) ಭಯೋತ್ಪಾದಕರನ್ನು ಬಿಡುಗಡೆ ಮಾಡಿದೆ ಎಂದು ಇಸ್ರೇಲ್ ನ ಜೈಲು ಸೇವಾ ವಿಭಾಗ ಗುರುವಾರ ತಿಳಿಸಿದೆ.
ಜನವರಿ 19ರಿಂದ ಪ್ಯಾಲೆಸ್ತೀನ್ ಒಟ್ಟು 33 ಇಸ್ರೇಲಿಯ ಒತ್ತೆಯಾಳುಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡಿದೆ. ಇದರ ಪ್ರತಿಯಾಗಿ, ಇಸ್ರೇಲ್ ಇದುವರೆಗೆ ಒಟ್ಟು 1,778 ಪ್ಯಾಲೆಸ್ತೇನಿಯರನ್ನು ಬಿಡುಗಡೆ ಮಾಡಿದೆ.
ಬುಧವಾರ ರಾತ್ರಿ ಪರಸ್ಪರ ಒತ್ತೆಯಾಳುಗಳ ವಿನಿಮಯದ ಮೂಲಕ ಕದನ ವಿರಾಮದ ಮೊದಲ ಹಂತ ಯಶಸ್ವಿಯಾಗಿ ಪೂರ್ಣಗೊಂಡಿದೆ. ಉಳಿದ 59 ಒತ್ತೆಯಾಳುಗಳ ಭವಿಷ್ಯ ಇನ್ನೂ ನಿರ್ಧಾರಗೊಂಡಿಲ್ಲ ಮತ್ತು ಮಾತುಕತೆಯ ಮೂಲಕ ತೀರ್ಮಾನಿಸಲಾಗುವುದು.
ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿ ಕನಿಷ್ಠ 1,200 ಜನರನ್ನು ಕೊಂದು, 252 ಇಸ್ರೇಲಿಯರು ಹಾಗೂ ಕೆಲ ವಿದೇಶೀಯರನ್ನು ಒತ್ತೆಯಾಳುಗಳಾಗಿ ಬಂಧಿಸಿತು. ಇದಕ್ಕೆ ಪ್ರತೀಕಾರವಾಗಿ, ಇಸ್ರೇಲ್ ಪ್ಯಾಲೆಸ್ತೀನ್ ವಿರುದ್ಧ ಯುದ್ಧ ಘೋಷಿಸಿತು.
ಈ ಹಿಂಸಾಚಾರದ ಪರಿಣಾಮ 40,000ಕ್ಕೂ ಹೆಚ್ಚು ಪ್ಯಾಲೆಸ್ತೇನಿಯರು ಸಾವನ್ನಪ್ಪಿದ್ದಾರೆ. ಜನವರಿಯಲ್ಲಿ ನಡೆದ ಕದನ ವಿರಾಮ ಒಪ್ಪಂದದ ಪ್ರಕಾರ, ಹಮಾಸ್ ಹಂತ ಹಂತವಾಗಿ ಇಸ್ರೇಲ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿತ್ತು, ಇದಕ್ಕೆ ಪ್ರತಿಯಾಗಿ ಇಸ್ರೇಲ್ ಪ್ಯಾಲೆಸ್ತೀನ್ ಯುದ್ಧ ಕೈದಿಗಳನ್ನು ಬಿಡುಗಡೆ ಮಾಡಿತು. ಉಳಿದ 59 ಒತ್ತೆಯಾಳುಗಳಲ್ಲಿ 32 ಮಂದಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.