
ಇಸ್ರೇಲ್ (Israel) ಮತ್ತು ಇರಾನ್ (Iran) ನಡುವೆ 12 ದಿನಗಳ ಕಾಲ ನಡೆದ ಯುದ್ಧಕ್ಕೆ ವಿರಾಮ ಘೋಷಿಸಲಾಗಿತ್ತು. ಆದರೆ ಇಸ್ರೇಲ್ ಆರೋಪಿಸಿದಂತೆ, ಇರಾನ್ ಕದನವಿರಾಮ ಒಪ್ಪಂದವನ್ನು ಉಲ್ಲಂಘಿಸಿ ಮತ್ತೆ ಕ್ಷಿಪಣಿ ದಾಳಿ ಆರಂಭಿಸಿದೆ. ಇದಕ್ಕೆ ತೀವ್ರ ಪ್ರತಿಕ್ರಿಯೆ ನೀಡಿದ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್, ತಮ್ಮ ಸೇನೆಗೆ ಟೆಹ್ರಾನ್‌ನಲ್ಲಿರುವ ಇರಾನ್ ಆಸ್ತಿಗಳು ಮತ್ತು ಮೂಲಸೌಕರ್ಯಗಳ ಮೇಲೆ ಗಂಭೀರ ದಾಳಿ ನಡೆಸಲು ಆದೇಶ ನೀಡಿದ್ದಾರೆ.
ಇದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಮಧ್ಯಸ್ಥಿಕೆಯಿಂದ ಆಗಿದ್ದ ಕದನವಿರಾಮ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕಾಟ್ಜ್ ಆರೋಪಿಸಿದ್ದಾರೆ. ಈ ಘಟನೆಯ ಬಳಿಕ ಇಸ್ರೇಲ್ “ಪ್ರತೀಕಾರ ತೆಗೆದುಕೊಳ್ಳುತ್ತೆ” ಎಂಬ ಎಚ್ಚರಿಕೆ ನೀಡಿದೆ.
ಇರಾನ್, ಇಸ್ರೇಲ್ ವಿರುದ್ಧ ಕ್ಷಿಪಣಿಗಳಿಂದ ದಾಳಿ ಮಾಡಿದರೂ, ಇಸ್ರೇಲ್ ತನ್ನ ರಕ್ಷಣಾ ವ್ಯವಸ್ಥೆಯಿಂದ ಆ ದಾಳಿಗಳನ್ನು ತಡೆದಿದೆ ಎಂದು ವರದಿಯಾಗಿದೆ. ಇಸ್ರೇಲ್ ನ ಹಣಕಾಸು ಸಚಿವ ಸ್ಮೋಟ್ರಿಚ್ ಕೂಡ, “ಇರಾನ್ ನಡುಗುತ್ತಿದೆ” ಎಂದು ಬರೆದು ತೀವ್ರ ಶಬ್ದದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇಸ್ರೇಲ್ ಪ್ರಧಾನಿ ನೆತನ್ಯಾಹು, ಇರಾನ್ನ ಪರಮಾಣು ಮತ್ತು ಕ್ಷಿಪಣಿ ಬೆದರಿಕೆಯನ್ನು ಕುಗ್ಗಿಸಲು ಇಸ್ರೇಲ್ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ. ಇಸ್ರೇಲ್ ಮತ್ತು ಇರಾನ್ ಎರಡೂ ರಾಷ್ಟ್ರಗಳು, ಅಮೆರಿಕದ ಒತ್ತಾಯದಿಂದ ಸೀಮಿತ ಕಾಲದ ವಿರಾಮಕ್ಕೆ ಒಪ್ಪಿಗೆ ನೀಡಿದರೂ, ಆ ವಿರಾಮ ಕೆಲವೇ ಗಂಟೆಗಳಲ್ಲಿ ಮುರಿದಾಗಿದೆ.
ಜೂನ್ 13ರಂದು ಇಸ್ರೇಲ್ ಆರಂಭಿಸಿದ “ಆಪರೇಷನ್ ರೈಸಿಂಗ್ ಲಯನ್” ಸಂದರ್ಭದಲ್ಲಿ ಇರಾನ್‌ನ ಉನ್ನತ ಸೇನಾ ಅಧಿಕಾರಿಗಳು ಮೃತರಾದರು. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಇಸ್ರೇಲ್‌ನ ಪ್ರಮುಖ ನಗರಗಳಾದ ಟೆಲ್‌ಅವೀವ್ ಮತ್ತು ಹೈಫಾದ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.
ಇದರಿಂದ ಇಸ್ರೇಲ್–ಇರಾನ್ ನಡುವಿನ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿದೆ.