
Bengaluru: ಕರ್ನಾಟಕದ ಜಾತಿ ಗಣತಿ ವರದಿ ಹೊಸ ತಿರುವು ಪಡೆದುಕೊಂಡಿದೆ. ಈ ವರದಿಯಲ್ಲಿ ಕೆಲ ಸಮುದಾಯಗಳ ಜನಸಂಖ್ಯೆ ಹೇಗೆ ಹೆಚ್ಚಾಗಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಅದರಲ್ಲಿಯೂ ಮುಸ್ಲಿಮರ ಜನಸಂಖ್ಯೆ (Muslim population) 30 ವರ್ಷಗಳಲ್ಲಿ ಶೇ.90 ಹೆಚ್ಚು ಆಗಿರುವುದು ಗಮನ ಸೆಳೆಯುತ್ತಿದೆ.
2015ರ ಕಾಂತರಾಜು ಆಯೋಗದ ಸಮೀಕ್ಷೆಯ ಪ್ರಕಾರ, 1984ರಲ್ಲಿ 39 ಲಕ್ಷಕ್ಕಿಂತ ಹೆಚ್ಚು ಇದ್ದ ಮುಸ್ಲಿಮರ ಸಂಖ್ಯೆ ಈಗ 76 ಲಕ್ಷಕ್ಕೆ ಏರಿಕೆಯಾಗಿದೆ. ಇದು ಶೇ.94ರಷ್ಟು ಹೆಚ್ಚಳವಾಗಿದೆ. ಇದೊಂದು ದೊಡ್ಡ ಬೆಳವಣಿಗೆ ಎನ್ನಬಹುದು.
1984ರ ವೆಂಕಟಸ್ವಾಮಿ ಸಮೀಕ್ಷೆಯಲ್ಲಿ 61 ಲಕ್ಷ ಜನರೊಂದಿಗೆ ಮೊದಲ ಸ್ಥಾನದಲ್ಲಿದ್ದ ವೀರಶೈವ ಲಿಂಗಾಯತರು ಈಗ 66 ಲಕ್ಷದವರಾಗಿದ್ದಾರೆ. ಆದರೆ, ಇವರು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಇವರ ವೃದ್ಧಿ ಕೇವಲ ಶೇ.8.5ರಷ್ಟೇ ಆಗಿದೆ.
ಎಸ್ಸಿ ಸಮುದಾಯ 57 ಲಕ್ಷದಿಂದ 1 ಕೋಟಿ ಜನರವರಗೆ ಬೆಳದಿದ್ದು, ಶೇ.90ರಷ್ಟು ಬೆಳವಣಿಗೆಯಾಗಿದೆ. ಲಿಂಗಾಯತರು ಶೇಕಡಾ 17ರಷ್ಟು ಜನಸಂಖ್ಯೆಯೊಂದಿಗೆ ಮೊದಲ ಸ್ಥಾನದಲ್ಲಿದ್ದರು, ಆದರೆ ಈಗ ಅವರು ಮೂರನೇ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನಕ್ಕೆ ಮುಸ್ಲಿಮರು ಏರಿದ್ದಾರೆ.
ವಿಪಕ್ಷ ಬಿಜೆಪಿ, ಈ ವರದಿಯನ್ನು ಪ್ರಶ್ನಿಸುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರ ಮನೆಯಲ್ಲಿಯೇ ವರದಿ ಸಂಗ್ರಹವಾಗಿದೆ ಎಂಬ ಆರೋಪ ಹಾಕಿದೆ. ವರದಿ ನಕಲಿ, ಬೋಗಸ್ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಡಿಸಿಎಂ ಡಿಕೆ ಶಿವಕುಮಾರ್ ಇದಕ್ಕೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಎಂಎಲ್ಸಿ ನಾಗರಾಜ್ ಯಾದವ್, ವರದಿಯಲ್ಲಿ ಗೊಲ್ಲ, ಕಾಡುಗೊಲ್ಲ, ಯಾದವ ಸಮುದಾಯದ ಜನಸಂಖ್ಯೆ ತಪ್ಪಾಗಿ ತೋರಿಸಲಾಗಿದೆ ಎಂದು ಹೇಳಿದ್ದಾರೆ. ಕಾಡುಗೊಲ್ಲ ಸಮುದಾಯದ ಜನರ ಸಂಖ್ಯೆ ಕಡಿಮೆ ತೋರಿಸಲಾಗಿದೆ ಎಂದು ದೂರಿದ್ದು, ತಿದ್ದುಪಡಿ ಮಾಡಬೇಕೆಂದು ಮನವಿ ಮಾಡಿದ್ದಾರೆ.