Bengaluru: ರೈಲಿನಲ್ಲಿ ಗಾಂಜಾ ಸರಬರಾಜು (cannabis Racket) ಮಾಡುತ್ತಿದ್ದ ಎಂಟು ಮಂದಿಯನ್ನು ಬೆಂಗಳೂರು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಅವರಿಂದ 1 ಕೋಟಿ ರೂ. ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಚೆಕ್ಪೋಸ್ಟ್ನಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿದೆ. ಇದರಿಂದ ಪೆಡ್ಲರ್ ಗಳು ಹೊಸ ಮಾರ್ಗಗಳನ್ನು ಪ್ರಯೋಗಿಸುತ್ತಿದ್ದಾರೆ. ಈ ಕೃತ್ಯದಲ್ಲಿ, ಪ್ರಶಾಂತಿ ಮತ್ತು ಹಟಿಯಾ ಎಕ್ಸ್‌ಪ್ರೆಸ್ ರೈಲುಗಳನ್ನು ಬಳಸಲಾಗುತ್ತಿತ್ತು. ರೈಲ್ವೆ ಪೊಲೀಸರ ದಾಳಿಯಲ್ಲಿ ಗಾಂಜಾ ತುಂಬಿದ್ದ ಬ್ಯಾಗ್‌ಗಳು ಪತ್ತೆಯಾದವು.
ಹೊಸ ವರ್ಷಾಚರಣೆ ವೇಳೆ ಶಾಂತಿ ಕಾಪಾಡಲು ಸಿಸಿಬಿ ಅಧಿಕಾರಿಗಳು ಬೆಂಗಳೂರಿನ ರೌಡಿಶೀಟರ್‌ಗಳ ಮನೆಗಳಿಗೆ ದಾಳಿ ನಡೆಸಿದರು. 20ಕ್ಕೂ ಹೆಚ್ಚು ಮನೆಗಳಲ್ಲಿ ದಾಳಿ ನಡೆಯಿತು.
ಯಲಹಂಕ ವ್ಯಾಪ್ತಿಯ ವಿಲ್ಸನ್‌ಗಾರ್ಡನ್ ನಾಗ, ಡಬಲ್ ಮೀಟರ್ ಮೋಹನ್ ಹಾಗೂ ಪುನೀತ್ ಮನೆಗಳಲ್ಲಿ ಶಸ್ತ್ರಾಸ್ತ್ರ ಪತ್ತೆಯಾಗಿದೆ. 10ಕ್ಕೂ ಹೆಚ್ಚು ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಿಸಿಬಿ ಪೊಲೀಸರು ಇಬ್ಬರು ವಿದೇಶಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. 3 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಸೋಲದೇವನಹಳ್ಳಿಯ ಮನೆಯ ಮೇಲೆ ದಾಳಿ ನಡೆಸಿದಾಗ ಎಂಡಿಎಂಎ ಕ್ರಿಸ್ಟಲ್, ಕೊಕೇನ್, ಎಕ್ಸೆಟೆಸಿ ಪಿಲ್ಸ್ ಪತ್ತೆಯಾಗಿದೆ.
ಈ ವಿದೇಶಿ ಪೆಡ್ಲರ್‌ಗಳು ಹೊಸ ವರ್ಷಾಚರಣೆಗೆಂದು ಡ್ರಗ್ಸ್ ಮಾರಾಟಕ್ಕೆ ಸಜ್ಜಾಗಿದ್ದರು. ಅವರು ಮೆಡಿಕಲ್ ವೀಸಾದಡಿ ಭಾರತಕ್ಕೆ ಬಂದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.