
Bengaluru: ಹೆಗ್ಡೆ ನಗರದಲ್ಲಿರುವ ಮದರಸಾದಲ್ಲಿ (madrasa) 11 ವರ್ಷದ ಬಾಲಕಿಯ ಮೇಲೆ ದೈಹಿಕ ದೌರ್ಜನ್ಯ ನಡೆದಿರುವ ಘಟನೆ ಫೆಬ್ರವರಿ 16 ರಂದು ನಡೆದಿದೆ. ಮದರಸಾದೊಳಗೆ ಅಳವಡಿಸಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳು ಈ ಘಟನೆಯನ್ನು ಸೆರೆಹಿಡಿದಿವೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಸಂತ್ರಸ್ತೆಯ ತಾಯಿಯ ದೂರಿನ ಪ್ರಕಾರ, ಬಾಲಕಿಯನ್ನು ಜುಲೈ 2024ರಲ್ಲಿ 5ನೇ ತರಗತಿಗೆ ಮದರಸಾ ಮತ್ತು ಅದರ ಹಾಸ್ಟೆಲಿಗೆ ದಾಖಲಿಸಲಾಗಿದೆ. ಹಾಸ್ಟೆಲ್ ಉಸ್ತುವಾರಿಯ ಮಗ ಮೊಹಮ್ಮದ್ ಹಸನ್ ಆಗಾಗ್ಗೆ ಹಾಸ್ಟೆಲ್ ಗೆ ಭೇಟಿ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಫೆಬ್ರವರಿ 16ರಂದು ಸಂಜೆ 4.30ರ ಸುಮಾರಿಗೆ, ಹಸನ್ ಬಾಲಕಿಯನ್ನು ಕಚೇರಿಗೆ ಕರೆಸಿ, ಥಳಿಸಿರುವುದಾಗಿ ಮತ್ತು ಇತರ ಹಾಸ್ಟೆಲ್ ಹುಡುಗಿಯರೊಂದಿಗೆ ಆಟವಾಡಿದ ಕಾರಣ ಜಗಳವಾಡಿರುವುದಾಗಿ ಆರೋಪಿಸಲಾಗಿದೆ.
ಈ ಪ್ರಕರಣವನ್ನು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ 75 (ಮಕ್ಕಳ ಮೇಲಿನ ಕ್ರೌರ್ಯ) ಮತ್ತು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115 (ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು) ಅಡಿಯಲ್ಲಿ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.