ಅಸ್ಸಾಂ CM ಹಿಮಂತ ಬಿಸ್ವಾ ಶರ್ಮಾ ಹೇಳುವಂತೆ, ಅಸ್ಸಾಂ ನಾಗರಿಕ ಸೇವಾ (ACS officer) ಅಧಿಕಾರಿಯೊಬ್ಬರು ತಮ್ಮ ಆದಾಯಕ್ಕಿಂತ 400 ಪಟ್ಟು ಹೆಚ್ಚಿನ ಆಸ್ತಿಯನ್ನು ಸಂಗ್ರಹಿಸಿದ್ದ ಕಾರಣ ಅವರನ್ನು ಬಂಧಿಸಲಾಗಿದೆ. ಸೋಮವಾರ ವಿಶೇಷ ಜಾಗೃತ ದಳದ ಅಧಿಕಾರಿಗಳು ನೂಪುರ್ ಬೋರಾ ಅವರ ಮನೆಗಳಲ್ಲಿ ದಾಳಿ ನಡೆಸಿ 92.50 ಲಕ್ಷ ರೂ. ನಗದು ಮತ್ತು ಸುಮಾರು 1.5 ಕೋಟಿ ರೂ. ಮೌಲ್ಯದ ಆಭರಣಗಳನ್ನು ಪತ್ತೆಹಚ್ಚಿದ್ದಾರೆ. ಬಂಧನದ ಸಮಯದಲ್ಲಿ ಬೋರಾ ಕಾಮರೂಪ ಜಿಲ್ಲೆಯ ಗೋರೈಮರಿಯಲ್ಲಿ ವೃತ್ತಾಧಿಕಾರಿಯಾಗಿ ನೇಮಕಗೊಂಡಿದ್ದರು.
ಬಕ್ಸಾ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹೇಳಿದ್ದಾರೆ, “ಅಧಿಕಾರಿಯನ್ನು ಕೇವಲ ಅಮಾನತು ಅಥವಾ ಕೆಲಸದಿಂದ ವಜಾಗೊಳಿಸುವುದಲ್ಲ, ಕಾನೂನಿನ ಪ್ರಕ್ರಿಯೆ ಮೂಲಕ ದಂಡ ವಿಧಿಸಬೇಕು. ಇನ್ನೂ ಕೆಲವರನ್ನು ವಿಚಾರಣೆ ಮಾಡುತ್ತಿದ್ದೇವೆ.” ಅವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿ, “ಯಾವುದೇ ಅಧಿಕಾರಿ ಲಂಚ ಕೇಳಿದರೆ ನಮಗೆ ತಿಳಿಸಬೇಕು” ಎಂದಿದ್ದಾರೆ.
ಬೋರಾ ಕಳೆದ ಆರು ತಿಂಗಳಿನಿಂದ ಕಣ್ಗಾವಲಿನಲ್ಲಿ ಇದ್ದರು ಮತ್ತು ನಂತರ ಅವರನ್ನು ಜಿಲ್ಲೆಯಿಂದ ಹೊರಗೆ ವರ್ಗಾಯಿಸಲಾಗಿತ್ತು. ಪ್ರಾಥಮಿಕ ತನಿಖೆಯ ಆಧಾರದಲ್ಲಿ ಬಂಧನ ಮಾಡಲಾಗಿದೆ ಎಂದು ಮುಖ್ಯಮಂತ್ರಿಯ ವಿಶೇಷ ಜಾಗೃತ ದಳದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರೋಸಿ ಕಲಿತಾ ತಿಳಿಸಿದ್ದಾರೆ. ಗುವಾಹಟಿಯ ಫ್ಲಾಟ್ ಮತ್ತು ಬಾರ್ಪೇಟಾದ ಬಾಡಿಗೆ ವಸತಿಗೃಹದಲ್ಲಿ 92.50 ಲಕ್ಷ ರೂ. ನಗದು ಪತ್ತೆಗೊಂಡಿದ್ದು, ಇದು ವಶಪಡಿಸಿಕೊಂಡ ಅತಿದೊಡ್ಡ ಮೊತ್ತ ಎಂದು ಅವರು ತಿಳಿಸಿದ್ದಾರೆ.