
ದಾವಣಗೆರೆ ಜಿಲ್ಲೆಯ ಆಲೂರು ಗ್ರಾಮದಲ್ಲಿ ಪಿ.ಬಿ. ಸುಶ್ಮಿತಾ ಎಂಬ 6ನೇ ತರಗತಿ ವಿದ್ಯಾರ್ಥಿನಿ ಮೂಲಸೌಕರ್ಯಗಳ ಕೊರತೆಯ ವಿರುದ್ಧ ಗ್ರಾಮ ಪಂಚಾಯಿತಿಯ ಎದುರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.
ಸುಶ್ಮಿತಾ ಓದುತ್ತಿರುವ ದೇವರಾಜ್ ಅರಸು ಪ್ರಾಥಮಿಕ ಶಾಲೆಗೆ ಹೋಗುವ ರಸ್ತೆ ತುಂಬಾ ಹದಗೆಟ್ಟಿದೆ. ಮಳೆಯಾದಾಗ ಕೆಸರು ನೀರು ತುಂಬಿ ವಿದ್ಯಾರ್ಥಿಗಳು, ಶಿಕ್ಷಕರು ಬಿದ್ದು ಹೋಗುವ ಘಟನೆಗಳು ನಡೆದಿವೆ. ಇದನ್ನು ಸರಿಪಡಿಸಬೇಕು ಎಂಬುದು ಆಕೆಯ ಮೊದಲ ಬೇಡಿಕೆ.
ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿಲ್ಲದೆ ಜನ ಪರದಾಡುತ್ತಿದ್ದಾರೆ. ಆದ್ದರಿಂದ ನೀರಿನ ಘಟಕವನ್ನು ಕೂಡಲೇ ಆರಂಭಿಸಬೇಕೆಂದು ಆಕೆ ಆಗ್ರಹಿಸಿದರು.
ಗ್ರಾಮದ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಇದರಿಂದ ಗ್ರಾಮಸ್ಥರಿಗೆ ತೊಂದರೆ ಆಗುತ್ತಿದೆ. ಇದನ್ನು ತಕ್ಷಣ ಸರಿಪಡಿಸಬೇಕೆಂದು ಸುಶ್ಮಿತಾ ಒತ್ತಾಯಿಸಿದರು.
ಆಕೆ ಪ್ಲಾಸ್ಟಿಕ್ ಕುರ್ಚಿಗೆ ತನ್ನ ಬೇಡಿಕೆಗಳನ್ನು ಬರೆದು ಫಲಕ ಕಟ್ಟಿ, ಗ್ರಾಮ ಪಂಚಾಯಿತಿ ಕಚೇರಿಯ ಮುಂದೆ ಕುಳಿತು ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿನಿಯ ಪ್ರತಿಭಟನೆಯ ಬಗ್ಗೆ ತಿಳಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಸ್ಥಳಕ್ಕೆ ಬಂದು ಮಾತುಕತೆ ನಡೆಸಿದರು. ರಸ್ತೆ ದುರಸ್ತಿ, ಚರಂಡಿ ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು. ಬಳಿಕ ಸುಶ್ಮಿತಾ ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.
“ನನ್ನ ಬೇಡಿಕೆಗಳು ಈಡೇರದಿದ್ದರೆ ಮತ್ತೆ ಪ್ರತಿಭಟನೆ ನಡೆಸುತ್ತೇನೆ,” ಎಂದು ಸುಶ್ಮಿತಾ ಎಚ್ಚರಿಸಿದರು.