Chikkaballpur : ವೈಕುಂಠ ಏಕಾದಶಿ (Vaikunata Ekadashi) ಪ್ರಯುಕ್ತ ಗುರುವಾರ ಜಿಲ್ಲೆಯಾದ್ಯಂತ ವಿಷ್ಣು ದೇಗುಲಗಳಲ್ಲಿ ವಿಶೇಷ ಪೂಜೆ, ಕೈಂಕರ್ಯಗಳು ಶ್ರದ್ಧಾ ಭಕ್ತಿಯಿಂದ ಸರಳವಾಗಿ ನೆರವೇರಿತು. Covid-19 ಕಾರಣದಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರಲಿಲ್ಲ. ಚಿಕ್ಕಬಳ್ಳಾಪುರ ನಗರದ ಕಂದವಾರದ ವೆಂಕಟೇಶ್ವರ ದೇವಾಲಯ, ಬಾಗೇಪಲ್ಲಿಯ ಗಡಿದಂ, ಚಿಂತಾಮಣಿಯ ಆಲಂಗಿರಿ ಕಲ್ಕಿ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಯದಲ್ಲಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ವೈಕುಂಠ ದ್ವಾರವನ್ನು ತೆರೆಯಲಾಗಿತ್ತು.
ಚಿಕ್ಕಬಳ್ಳಾಪುರ
Chikkaballapur : ಕಂದವಾರ ಬಾಗಿಲಿನ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಿ ಆವರಣದಲ್ಲಿ ಸ್ವಾಮಿಯ ವೈಕುಂಠ ದ್ವಾರವನ್ನು ತೆರೆಯಲಾಗಿತ್ತು.
ಚಿಕ್ಕಬಳ್ಳಾಪುರ ತಾಲ್ಲೂಕಿನ ಕೊಟಗಾರ್ಲಹಳ್ಳಿ ಬಳಿಯ ಶ್ರೀನಿವಾಸ ಸಾಗರ ಜಲಾಶಯಕ್ಕೆ ಹೊಂದಿಕೊಂಡಂತಿರುವ ವೆಂಕಟೇಶ್ವರಸ್ವಾಮಿ ದೇವಾಲಯ, ನಂದಿ ಹೋಬಳಿಯ ಗೋಪಿನಾಥ ಬೆಟ್ಟದಲ್ಲಿರುವ ಗೋವರ್ಧನಗಿರಿ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು.
ಚಿಂತಾಮಣಿ
Chintamani : ಆಲಂಗಿರಿ ಕಲ್ಕಿ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಯದಲ್ಲಿ ಹಾಗೂ ಚಿಲಕಲನೇರ್ಪು ಹೋಬಳಿಯ ಏನಿಗದಲೆ- ಬುರುಡಗುಂಟೆ ರಸ್ತೆಯಲ್ಲಿರುವ ಶ್ರೀಹರಿ ಕ್ಷೇತ್ರ ವೈಕುಂಠಪುರದ ವೆಂಕಟರಮಣಸ್ವಾಮಿ ದೇವಾಲಯದಲ್ಲೂ ವೈಕುಂಠ ಏಕಾದಶಿಯನ್ನು ವೈಕೂಂಠ ದ್ವಾರ ತೆರೆಯುವ ಮೂಲಕ ಆಚರಿಸಲಾಯಿತು.
ಶಿಡ್ಲಘಟ್ಟ
Sidlaghatta : ಶಿಡ್ಲಘಟ್ಟ ನಗರದ KHB ಕಾಲೋನಿಯ ವೆಂಕಟೇಶ್ವರ ಸ್ವಾಮಿಯ ದೇವಾಲಾಯದಲ್ಲಿ ಸ್ವಾಮಿಯವರಿಗೆ ಅಭಿಷೇಕ ಕೈಂಕರ್ಯಗಳೊಂದಿಗೆ ಪೂಜೆ ನಡೆಯಿತು. ಬೆಳಗ್ಗೆಯಿಂದಲೇ ಭಕ್ತರು ವೈಕೂಂಠ ದ್ವಾರದಲ್ಲಿ ಸ್ವಾಮಿಯವರ ದರ್ಶನ ಪಡೆದರು.
ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಆತ್ಮಾರಾಮ ದೇವಸ್ಥಾನದಲ್ಲಿ 1,000 ಲಾಡುಗಳನ್ನು ಪ್ರಸಾದವಾಗಿ ಹಂಚಲಾಯಿತು. ತಾಲ್ಲೂಕಿನ ಮಳ್ಳೂರು ಸಮೀಪದ ಶ್ರೀ ಸಾಯಿನಾಥ ಜ್ಞಾನಮಂದಿರ, ಚೌಡಸಂದ್ರದ ಸೋಮೇಶ್ವರಸ್ವಾಮಿ ದೇವಸ್ಥಾನ, ತಲಕಾಯಲಬೆಟ್ಟದ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯ, ಚಿಕ್ಕದಾಸರಹಳ್ಳಿ ಬಳಿಯ ಬ್ಯಾಟರಾಯಸ್ವಾಮಿ ದೇವಾಲಯ, ಜಂಗಮಕೋಟೆ ಬಳಿಯ ಮುತ್ಯಾಲಮ್ಮ ದೇವಸ್ಥಾನ, ನಗರದ ಹೌಸಿಂಗ್ ಬೋರ್ಡ್ ಕಾಲೋನಿಯ ಕಲ್ಯಾಣ ವೆಂಕಟೇಶ್ವರಸ್ವಾಮಿ ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳನ್ನು ನಡೆಸಲಾಗಿತ್ತು.
ಬಾಗೇಪಲ್ಲಿ
Bagepalli : ಬಾಗೇಪಲ್ಲಿ ತಾಲ್ಲೂಕಿನ ಚೇಳೂರು ಚಿಗಟೀಗಲಗುಟ್ಟ ಗ್ರಾಮ ದೇವಾಲಯ, ಚೇಳೂರಿನ ಕನ್ನಿಕಾ ಪರಮೇಶ್ವರ ದೇವಾಲಯ, ಗಡಿಗಿವಾರಪಲ್ಲಿ ಬೆಟ್ಟದ ಲಕ್ಷೀನರಸಿಂಹ ಸ್ವಾಮಿ ದೇವಾಲಯಗಳಲ್ಲಿ ವೈಕುಂಠ ಏಕಾದಶಿಯ ಪ್ರಯುಕ್ತ ಭಕ್ತರು ವಿಶೇಷ ಪೂಜೆ ನೆರವೇರಿಸಿ ವೈಕುಂಠ ದ್ವಾರ ಮೂಲಕ ಭಕ್ತರು ದರ್ಶನ ಪಡೆದರು.
ಗೌರಿಬಿದನೂರು
Gauribidanur : ಗೌರಿಬಿದನೂರು ನಗರದ ಲಕ್ಷ್ಮಿವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಭಕ್ತರುವಿಶೇಷ ಪೂಜೆ ನೆರೆವೇರಿಸಿದರು. ವಿಶ್ವ ಹಿಂದೂ ಪರಿಷದ್ ಹಾಗೂ ಶನಿಮಹಾತ್ಮ ದೇವಸ್ಥಾನದ ಸೇವಾ ಸಮಿತಿ ವತಿಯಿಂದ ಗುರುವಾರ ವೈಕುಂಠ ಏಕಾದಶಿಯ ಅಂಗವಾಗಿ ಲೋಕ ಕಲ್ಯಾಣಾರ್ಥಕವಾಗಿ ಮಹಾ ಮೃತ್ಯುಂಜಯ ಹೋಮವನ್ನು ಹಮ್ಮಿಕೊಳ್ಳಲಾಗಿತ್ತು.