Devanahalli, Bengaluru Rural : ವಿಜಯಪುರದ (Vijayapura) ಬಸಪ್ಪನ ತೋಪಿನಲ್ಲಿ ಅಂದಾಜು ₹19 ಲಕ್ಷ ವೆಚ್ಚದಲ್ಲಿ ನಾಡಕಚೇರಿಯ ನೂತನ ಕಟ್ಟಡ ನಿರ್ಮಾಣಕ್ಕೆ (Nadakacheri Building Construction) ಶಾಸಕ ನಿಸರ್ಗ ನಾರಾಯಣಸ್ವಾಮಿ ಭೂಮಿಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು “ರಾಜ್ಯ ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ನಾಡಕಚೇರಿಯ ಕಟ್ಟಡಗಳು ಗುಣಮಟ್ಟದಿಂದ ಕೂಡಿರುವುದರೊಂದಿಗೆ ಸಾರ್ವಜನಿಕರಿಗೆ ಅನುಕೂಲವಾಗುವಂತಿರಬೇಕು. ಸ್ಥಳೀಯರು ದಾಖಲೆಗಳಿಗಾಗಿ ತಾಲ್ಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಬೇಕು ಎನ್ನುವುದು ಇಲ್ಲಿನ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಆದ್ದರಿಂದ ಸರ್ಕಾರದೊಂದಿಗೆ ಚರ್ಚಿಸಿ ನಾಡಕಚೇರಿಗೆ ಸಂಬಂಧಿಸಿದ ಜಾಗದಲ್ಲಿ ಮೊದಲ ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಎರಡು ಅಂತಸ್ತು ನಿರ್ಮಾಣದ ಗುರಿ ಇದೆ” ಎಂದು ಹೇಳಿದರು.
ಹಳೆ ಕಚೇರಿಯಲ್ಲಿ ಸೂಕ್ತ ಭದ್ರತೆಯಿಲ್ಲದರಿಂದ ತಾಲ್ಲೂಕು ಕಚೇರಿಯಿಂದ ಈವರೆಗೆ ದಾಖಲಾತಿಗಳನ್ನು ಇಲ್ಲಿಗೆ ತಂದಿಲ್ಲ. ಈಗ ಸರ್ಕಾರ, ಕೇವಲ ₹19 ಲಕ್ಷ ಬಿಡುಗಡೆ ಮಾಡಿ ನಾಡಕಚೇರಿ ಸ್ಥಾಪನಗೆ ಮುಂದಾಗಿದ್ದು ಪಟ್ಟಣದಿಂದ ಒಂದೂವರೆ ಕಿ.ಮೀ.ದೂರದಲ್ಲಿರುವ ಹೊಸ ಕಚೇರಿಗೆ ಸೂಕ್ತ ಕಾಂಪೌಂಡ್ ನಿರ್ಮಾಣ ಮಾಡಿ ಸೂಕ್ತ ಭದ್ರತೆ ಒದಿಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ತಹಶೀಲ್ದಾರ್ ಅನಿಲ್ ಕುಮಾರ್ ಅರೋಲಿಕರ್, ಪುರಸಭೆ ಮುಖ್ಯಾಧಿಕಾರಿ ಮೋಹನ್ ಕುಮಾರ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಮುನೇಗೌಡ, ಕಾರ್ಯಾಧ್ಯಕ್ಷ ಲಕ್ಷ್ಮಣ್, ಪ್ರಧಾನ ಕಾರ್ಯದರ್ಶಿಗಳಾದ ಜಿ.ಎ.ರವೀಂದ್ರ, ಕಲ್ಯಾಣ್ ಕುಮಾರ್ ಬಾಬು, ವಿಜಯಪುರ ಟೌನ್ ಅಧ್ಯಕ್ಷ ಎಸ್.ಭಾಸ್ಕರ್ ಮತಿತ್ತರರು ಉಪಸ್ಥಿತರಿದ್ದರು.