Chikkabllapur District : ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು (Makara Sankranti) ಸಂಭ್ರಮ ಸಡಗಡದಿಂದ ಆಚರಿಸಲಾಯಿತು. ಹಬ್ಬದ ಪ್ರಯುಕ್ತ ಹಳ್ಳಿ, ಪಟ್ಟಣ, ನಗರಗಳ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಅಭಿಷೇಕ, ಪೂಜೆ, ಮಂಗಳಾರತಿಗಳು ನಡೆದವು. ಸೂರ್ಯನಿಗೆ ಉತ್ತರಾಯಣ ಪುಣ್ಯಕಾಲದ ಅಂಗವಾಗಿ ಪೂಜೆ ಸಲ್ಲಿಸಿ, ನಮಸ್ಕರಿಸುತ್ತಿದ್ದ ದೃಶ್ಯಗಳು ಎಲ್ಲಾ ಮನೆಗಳಲ್ಲಿ ಸಾಮಾನ್ಯವಾಗಿದ್ದವು. ‘ಸುಗ್ಗಿಯ ಹಬ್ಬ’ದ ಪ್ರಯುಕ್ತ ರಾಸುಗಳನ್ನು ತೊಳೆದು ಬಗೆ ಬಗೆಯಲ್ಲಿ ಶೃಂಗರಿಸಿ, ಮೆರವಣಿಗೆ ನಡೆಸಿ ಸಂಜೆ ವೇಳೆ ಕಿಚ್ಚು ಹಾಯಿಸಿ ಜನರು ಸಂಭ್ರಮಿಸಿದರು.
ಚಿಕ್ಕಬಳ್ಳಾಪುರ
Chikkaballapur : ಚಿಕ್ಕಬಳ್ಳಾಪುರ ನಗರದ ಬಿ.ಬಿ.ರಸ್ತೆಯ ಅಯ್ಯಪ್ಪಸ್ವಾಮಿ ದೇವಾಲಯ, ಬಜಾರ್ ರಸ್ತೆ ಕೋದಂಡರಾಮಸ್ವಾಮಿ ದೇವಸ್ಥಾನ, ಬಾಲಾಜಿ ಚಿತ್ರಮಂದಿರ ಹಿಂಭಾಗದ ರಸ್ತೆಯ ಪ್ರಸಾದ ಗಣಪತಿ ಮಂದಿರ, ಕೋಟೆ ಕಾಳಿ ದೇವಸ್ಥಾನ, ರಂಗಸ್ಥಳದ ರಂಗನಾಥಸ್ವಾಮಿ ದೇವಾಲಯ, ಎಂ.ಜಿ.ರಸ್ತೆಯ ಮರುಳಸಿದ್ದೇಶ್ವರ, ಕಂದವಾರಪಟೆಯ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದ ಸೇರಿದಂತೆ ಹಲವಾರು ದೇವಾಲಯಗಳಲ್ಲಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆಗಳು ನಡೆದವು.
ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಅಯ್ಯಪ್ಪ ಸ್ವಾಮಿ ಆಸ್ತಿಕರ ಸೇವಾ ಸಂಘದಿಂದ ಪ್ರತಿ ವರ್ಷ ನಡೆಯುತ್ತಿದ್ದ ಸ್ವಾಮಿಯ ಉತ್ಸವ ಮೂರ್ತಿ ಮೆರವಣಿಗೆ ಕೋವಿಡ್ ಕಾರಣ ಇರಲಿಲ್ಲ.
ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವ ನಡೆಯಿತ್ತು.
ಗೌರಿಬಿದನೂರು
Guribidanur : ಗೌರಿಬಿದನೂರು ತಾಲ್ಲೂಕಿನ ಅಲಕಾಪುರದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಮಾಜಿ ಜಿ.ಪಂ ಸದಸ್ಯ ಕೆ.ಕೆಂಪರಾಜು ಅಲಕಾಪುರ, ಹೊಸೂರು, ಡಿ.ಪಾಳ್ಯ, ವಾಟದಹೊಸಹಳ್ಳಿ, ಹಳೇಊರು, ಕುರೂಡಿ, ಗಂಗಸಂದ್ರ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಸುಮಾರು 170 ಜಾನುವಾರುಗಳಿಗೆ ಪೂಜೆ ಸಲ್ಲಿಸಿ ರಾಸುಗಳಿಗೆ ಪಶು ಆಹಾರ ನೀಡಿದರು.
ಚಿಂತಾಮಣಿ
Chintamani : ಚಿಂತಾಮಣಿ ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಕೈವಾರ ಯೋಗಿನಾರೇಯಣ ಮಠದಲ್ಲಿ ಸಂಕ್ರಾಂತಿಯ ಅಂಗವಾಗಿ ಶನಿವಾರ ಗೋಪೂಜೆ ನಡೆಯಿತು. ಯೋಗಿನಾರೇಯಣ ದೇವಾಲಯದಲ್ಲಿ ವಿಶೇಷ ‘ರಾಮರಾಮ ಮುಕುಂದ ಮಾಧವ’ ನಾಮಜಪವನ್ನು ಸಮರ್ಪಿಸಲಾಯಿತು. ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಪೂಜೆಯಲ್ಲಿ ಭಾಗವಹಿಸಿದ್ದರು.
ಶಿಡ್ಲಘಟ್ಟ
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ 30 ದಿನಗಳ ಧನುರ್ಮಾಸದ ಪೂಜೆಯ ನಂತರ ಶನಿವಾರ ಮಕರ ಸಂಕ್ರಾಂತಿ ಹಬ್ಬದ ದಿನ ಆತ್ಮರಾಮ ಸ್ವಾಮಿ ಉತ್ಸವವನ್ನು ನಡೆಸಲಾಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾದಸ್ವರ ವಾದನದೊಂದಿಗೆ ಭಜನೆ ತಂಡದವರ ಹಾಡುಗಳೊಂದಿಗೆ ದೇವರನ್ನು ಮೆರವಣಿಗೆ ಮಾಡಲಾಯಿತು.
ತಾಲ್ಲೂಕಿನ ಮೇಲೂರಿನಲ್ಲಿ ಶನಿವಾರ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಶ್ರೀರಾಮ ಭಜನೆ ಮಂಡಳಿಯ ಭಕ್ತ ವೃಂದದಿಂದ ಶ್ರೀ ಸೀತಾ ರಾಮ ಲಕ್ಷ್ಮಣ ಆಂಜನೇಯ ರಥೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ನಾದಸ್ವರ ವಾದನದೊಂದಿಗೆ ಭಜನೆ ತಂಡದವರ ಹಾಡುಗಳೊಂದಿಗೆ ದೇವರನ್ನು ಮೆರವಣಿಗೆ ಮಾಡಲಾಯಿತು. ಸುತ್ತಮುತ್ತಲಿನ ಗ್ರಾಮಸ್ಥರು ಭಜನೆಯಲ್ಲಿ ಪಾಲ್ಗೊಂಡಿದ್ದರು.