Devanahalli, Bengaluru Rural : ದೇವನಹಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ (Taluk Panchayat) ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿ ಅಧಿಕಾರಿಗಳಿಗೆ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ರಮೇಶ್ ರೆಡ್ಡಿ ನಿರ್ದೇಶನ ನೀಡಿದರು.
ಸಭೆಯಲ್ಲಿ ಮಾತನಾಡಿದ ಆಡಳಿತಾಧಿಕಾರಿಗಳು “ಇಲಾಖಾವಾರು ಅನುಷ್ಠಾನಗೊಂಡಿರುವ ಯೋಜನೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ಅನುದಾನ ಸಂಪೂರ್ಣ ಸದ್ಬಳಕೆ ಆಗಬೇಕು. ರೈತರು ರಾಗಿ ಮಾರಾಟ ವಿಚಾರದಲ್ಲಿ ದಲ್ಲಾಳಿಗಳ ಮೊರೆ ಹೋಗದಂತೆ ಅಧಿಕಾರಿಗಳು ನೋಡಿಕೊಂಡು ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಕ್ರಮವಹಿಸಬೇಕು. ತುರ್ತು ಅಗತ್ಯವಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಸಭೆಯಲ್ಲಿ ಅನುಮೋದನೆ ಪಡೆಯಲು ಕ್ರಮವಹಿಸಿ, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಕಡೆ ಬೋರ್ ವೆಲ್ ನಿರ್ಮಾಣ ಮಾಡಿ ನೀರು ಸರಬರಾಜು ಮಾಡಬೇಕು” ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಇಒ ವಸಂತ್ ಕುಮಾರ್, ಪ್ರಧಾನಮಂತ್ರಿ ರೋಜ್‌ಗಾರ್ ಯೋಜನೆ ಸಹಾಯಕರಾದ ನಿರ್ದೇಶಕ ನಾರಾಯಣಪ್ಪ, ತಾ.ಪಂ ಸಹಾಯಕ ನಿರ್ದೇಶಕ ಸುನೀಲ್, ಮೀನುಗಾರಿಕೆ ಇಲಾಖಾಧಿಕಾರಿ ಮಿಲನಾ, ಸೋಮಶೇಖರ್, ಕೃಷ್ಣಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಸತೀಶ್, ಪಿಡಿಒ ಬೀರೇಶ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.