Bengaluru : ಕರ್ನಾಟಕ ಸರ್ಕಾರವು ಹೊಸ ವೆಬ್‌ಸೈಟ್ ಅನ್ನು ಪ್ರಾರಂಭಿಸುವ ಮೂಲಕ ಬೆಂಗಳೂರು ನಗರ ಎದುರಿಸುತ್ತಿರುವ ನಿರಂತರ ಸಮಸ್ಯೆಗಳನ್ನು ಪರಿಹರಿಸಲು ಹೆಜ್ಜೆಯನ್ನಿಟ್ಟಿದೆ. ನಗರದ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರಗಳನ್ನು ಕಂಡುಕೊಳ್ಳಲು ವಿಶ್ವಾದ್ಯಂತ ಜನರಿಂದ ಪ್ರತಿಕ್ರಿಯೆ ಮತ್ತು ಆಲೋಚನೆಗಳನ್ನು ಸಂಗ್ರಹಿಸುವ ಗುರಿಯನ್ನು ವೆಬ್‌ಸೈಟ್ ಹೊಂದಿದೆ.
ಜೂನ್ 30 ರವರೆಗೆ ಜನರು ತಮ್ಮ ಸಲಹೆಗಳನ್ನು http://www.brandbengaluru.karnataka.gov.in ವೆಬ್‌ಸೈಟ್‌ನಲ್ಲಿ ಸಲ್ಲಿಸಬಹುದು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ಗಡುವಿನ ನಂತರ ಕೂಡ ಜನರು ತಮ್ಮ ಸಲಹೆಗಳನ್ನು ಸಲ್ಲಿಸಬಹುದು ಆದರೆ ಸಕಾಲಕ್ಕೆ ಸಲ್ಲಿಸಿದರೆ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಸಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ವೆಬ್‌ಸೈಟ್‌ನ ವೇದಿಕೆಯು ಟ್ರಾಫಿಕ್ ನಿರ್ವಹಣೆ, ಆಡಳಿತ ಮತ್ತು ಘನ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಜನರ ಸಲಹೆಗಳನ್ನು ಸಂಗ್ರಹಿಸುವುದರ ಮೇಲೆ ಕೇಂದ್ರಿತವಾಗಿದೆ.
ಜಯನಗರದಂತಹ ಕೆಲವು ಪ್ರದೇಶಗಳನ್ನು ಹೊರತುಪಡಿಸಿದರೆ ಬೆಂಗಳೂರು ನಗರವಾಗಿ ಒಂದು ಸಮಗ್ರ ಯೋಜನೆಯ ಕೊರತೆಯನ್ನು ಹೊಂದಿದೆ ಎಂದು ಶಿವಕುಮಾರ್ ಒಪ್ಪಿಕೊಂಡರು. ಹೊಸದಾಗಿ ಪ್ರಾರಂಭಿಸಲಾದ ವೆಬ್‌ಸೈಟ್ ಬೆಂಗಳೂರಿನ ಅಭಿವೃದ್ಧಿಯಲ್ಲಿ ವಿವಿಧ ಪಾಲುದಾರರೊಂದಿಗೆ ತೊಡಗಿಸಿಕೊಳ್ಳಲು ಸರ್ಕಾರದ ವ್ಯಾಪಕ ಪ್ರಯತ್ನಗಳ ಭಾಗವಾಗಿದೆ ಎಂದಿದ್ದಾರೆ.
ಇದಲ್ಲದೆ, ಶಿವಕುಮಾರ್ ಅವರು ಗೃಹ ಸಚಿವ ಜಿ ಪರಮೇಶ್ವರ ಅವರೊಂದಿಗೆ ಹಾಲಿ ಮತ್ತು ನಿವೃತ್ತ ಸಂಚಾರ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಭೆಯು ನಗರದ ಟ್ರಾಫಿಕ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿರ್ದಿಷ್ಟವಾಗಿ ಪರಿಹರಿಸುವಲ್ಲಿ ಸಹಕಾರಿಯಾಗಲಿದೆ ಎಂದಿದ್ದಾರೆ.