Srinagar, Jammu and Kashmir : ಕಾಶ್ಮೀರ ಕಣಿವೆಯ ಮೊದಲ ಮುಸ್ಲಿಂ IAS ಅಧಿಕಾರಿ ಮುಹಮ್ಮದ್ ಶಫಿ ಪಂಡಿತ್ (Mohammad Shafi Pandit) ಗುರುವಾರ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ಪಂಡಿತ್, ದಿಲ್ಲಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಶಫಿ ಪಂಡಿತ್ ಅವರು ಹಲವಾರು ನಾಗರಿಕ ಸಂಘಟನೆಗಳ ಭಾಗವಾಗಿದ್ದರು. 1992ರಲ್ಲಿ ಭಾರತ ಸರಕಾರದ ಜಂಟಿ ಕಾರ್ಯದರ್ಶಿಯಾಗಿದ್ದ ಪಂಡಿತ್, ಮಂಡಲ್ ಆಯೋಗದ ವರದಿ ಜಾರಿಯಾಗುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಅವರು ಸ್ವಾಯತ್ತ ಜಮ್ಮು ಮತ್ತು ಕಾಶ್ಮೀರದ ನಾಗರಿಕ ಸೇವಾ ಆಯೋಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು.
ಪಂಡಿತ್ ಅವರ ಪಾರ್ಥಿವ ಶರೀರವನ್ನು ಇಂದು ಮಧ್ಯಾಹ್ನದ ವೇಳೆಗೆ ಶ್ರೀನಗರಕ್ಕೆ ತರಲಾಗುತ್ತದೆ ಎಂದು ವರದಿಯಾಗಿದೆ.