Bengaluru: ವಾಯುಭಾರತ ಕುಸಿತದಿಂದ ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಮಳೆ ಇರಲಿದೆ. ಆದರೆ ಮಳೆಯ (rain) ತೀವ್ರತೆ ಕಡಿಮೆಯಾಗಲಿದೆ.
ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಆಗಬಹುದು ಎಂದು ಭಾರತೀಯ ಹವಾಮಾನ ಇಲಾಖೆಯ (India Meteorological Department) ಬೆಂಗಳೂರು ಪ್ರದೇಶ ಕೇಂದ್ರವು ದೈನಂದಿನ ವರದಿಯಲ್ಲಿ ಮಾಹಿತಿ ನೀಡಿದೆ.
ಬುಧವಾರ ಬೆಳಗಿನ ಜಾವದವರೆಗೂ ಬೆಂಗಳೂರು ಕೆಲವು ಪ್ರದೇಶಗಳಲ್ಲಿ ಮಳೆಯಾದ ವರದಿಯಾಗಿದೆ. ಚೌಡೇಶ್ವರಿ ಹಾಗೂ ಎಚ್ಎಎಲ್ ವಿಮಾನ ನಿಲ್ದಾಣದ ಪ್ರದೇಶದಲ್ಲಿಯೇ ಹೆಚ್ಚಿನ ಮಳೆಯಾದ ವರದಿಯಾಗಿದೆ.
ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವೇ ಕಂಡು ಬರಲಿದೆ. ಕೆಲವೊಮ್ಮೆ ಸಾಧಾರಣ ಮಳೆಯಾಗಲಿದ್ದು, ಹಲವು ಭಾಗಗಳಲ್ಲಿ ಹಗುರ ಮಳೆಯೂ ಆಗಬಹುದು. ಬುಧವಾರ ಹಾಗೂ ಗುರುವಾರ ಎರಡೂ ದಿನವೂ ಮಳೆಯಾಗಲಿದೆ.
ಬುಧವಾರದಂದು ಕೆಲವು ಪ್ರದೇಶದಲ್ಲಿ ಮಳೆಯಾಗಲಿದ್ದು ಆರೆಂಜ್ ಅಲರ್ಟ್ ಅನ್ನು ಘೋಷಿಸಲಾಗಿದೆ. ಆದರೆ ಹಿಂದಿನ ಮೂರ್ನಾಲ್ಕು ದಿನಕ್ಕೆ ಹೋಲಿಸಿದರೆ ಮಳೆ ಪ್ರಮಾಣ ಬಹುತೇಕ ತಗ್ಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು (India Meteorological Department) ಮುನ್ಸೂಚನೆ ನೀಡಿದೆ.