ಪ್ರಸ್ತುತ ತಿಂಗಳ ಸಂಬಳಕ್ಕೆ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ದುಡಿಸಿಕೊಳ್ಳುತ್ತವೆ. ಎಲ್ಲೋ ಒಂದಷ್ಟು ಕಂಪನಿಗಳು ಹಬ್ಬಗಳಿಗೆ ಬೋನಸ್ (bonuse) ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕೂಡ ಕಲ್ಪಿಸುತ್ತವೆ.
ಆದರೆ ಇಲ್ಲೊಂದು ಕಂಪನಿ ಮಾಲೀಕ, ತನ್ನ ಸಹೋದ್ಯೋಗಿಗಳ ಕೆಲಸ ಮೆಚ್ಚಿ ಸದ್ದಿಲ್ಲದೇ ಅವರಿಗೆ ದುಬಾರಿ ಬೆಲೆಯ ಕಾರುಗಳನ್ನು (expensive car) ದೀಪಾವಳಿ ಹಬ್ಬಕ್ಕೂ ಮೊದಲೇ ಉಡುಗೊರೆ (gift) ನೀಡಿದ್ದಾರೆ. ಯಾವುದೇ ಸುಳಿವಿಲ್ಲದೇ ಗಿಫ್ಟ್ ಪಡೆದ ಕಂಪನಿ ನೌಕರರ ಕಣ್ಣುಗಳು ಮಾತ್ರ ಸಂತೋಷದಿಂದ ಒದ್ದೆಯಾದವು.
ಹರಿಯಾಣದ (Haryana) ಪಂಚಕುಲ (Panchkula) ಮೂಲದ ಔಷಧಿ ತಯಾರಿಕಾ ಕಂಪನಿ ಮಿಟ್ಸ್ ಹೆಲ್ತ್ಕೇರ್ (Mits Healthcare), ಮುಖ್ಯಸ್ಥ ಎಂ.ಕೆ.ಭಾಟಿಯಾ (M K Bhatia) ಅವರು, ನೂತನ ಕಾರುಗಳನ್ನು ಉಡೊಗೊರೆಯಾಗಿ ನೀಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ.
ಒಟ್ಟು 15 ಉದ್ಯೋಗಿಗಳಿಗೆ ಸ್ವತಃ ತಾವೇ ಹೊಸ ಕಾರಿನ ಕೀ ಹಸ್ತಾಂತರಿಸಿದ್ದಾರೆ. 13 ಟಾಟಾ ಪಂಚ್ (Tata Punch) ಹಾಗೂ 2 ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara) ಕಾರುಗಳು ಕಂಪನಿ ಸಿಬ್ಬಂದಿಗೆ ಗಿಫ್ಟ್ ರೂಪದಲ್ಲಿ ದೊರೆತಿವೆ.
ನೂತನ ಕಾರನ್ನು ಉಡೊಗೊರೆಯಾಗಿ ಪಡೆದ ಉದ್ಯೋಗಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವರು ತಮ್ಮ ಮಾಲೀಕರಿಗೆ ಮನಪೂರ್ವಕವಾಗಿ ಧನ್ಯವಾದ ಅರ್ಪಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಬ್ಬಂದಿಯೊಬ್ಬರು, ‘ನಾನು 3 ವರ್ಷಗಳ ಹಿಂದೆ ಈ ಕಂಪನಿಗೆ ಕೆಲಸಕ್ಕೆ ಸೇರಿದಾಗ, ನಮ್ಮ ಮುಖ್ಯಸ್ಥರು ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡುವ ಕನಸಿದೆ ಎಂದು ಹೇಳಿದ್ದರು. ಅದೀಗ ಸಹಕಾರಗೊಂಡಿದೆ’ ಎಂದು ತಿಳಿಸಿದ್ದಾರೆ.
ಕಳೆದ ವರ್ಷ ಕೂಡ ಮಿಟ್ಸ್ ಹೆಲ್ತ್ಕೇರ್ ಮಾಲೀಕ ಎಂ.ಕೆ.ಭಾಟಿಯಾ ಅವರು, 12 ಉದ್ಯೋಗಿಗಳಿಗೆ ಕಾರುಗಳನ್ನು ಉಡೊಗೊರೆ ರೂಪದಲ್ಲಿ ನೀಡಿದ್ದರು