Jerusalem: ಲೆಬನಾನ್ (Lebanon) ದೇಶದಲ್ಲಿ ನೆಲೆ ಹೊಂದಿರುವ ಹೆಜ್ಬೊಲ್ಲಾ (Hezbollah) ಉಗ್ರ ಸಂಘಟನೆಯ (terrorist organization) ಬೆನ್ನು ಮೂಳೆ ಮುರಿಯುವಲ್ಲಿ ಯಶಸ್ವಿಯಾಗಿದ್ದ ಇಸ್ರೇಲ್ (Israel) ಸೇನೆ, ಇದೀಗ ಮತ್ತೊಂದು ಸುತ್ತಿನ ಮರ್ಮಾಘಾತ ನೀಡಿದೆ.
ಹೆಜ್ಬೊಲ್ಲಾ ಉಗ್ರ ಸಂಘಟನೆ (terrorist organization) ಅಧಿನಾಯಕ ಹಸನ್ ನಸ್ರಲ್ಲಾ (Hassan Nasrallah) ಹತ್ಯೆ ಬಳಿಕ ಇದೀಗ ಈ ಉಗ್ರ ಸಂಘಟನೆಯ ಉಪ ನಾಯಕ ಎಂದೇ ಬಿಂಬಿತನಾಗಿದ್ದ ಹಾಶೆಂ ಸಫಿದ್ದೀನ್ ಎಂಬಾತನ ಕಥೆಯನ್ನೂ ಮುಗಿಸಿದೆ.
ಲೆಬನಾನ್‌ನ ರಾಜಧಾನಿ ಬೈರೂತ್ ನಗರದ ದಕ್ಷಿಣ ಭಾಗದಲ್ಲಿ ನಡೆದ ಏರ್ ಸ್ಟ್ರೈಕ್‌ನಲ್ಲಿ ಹಾಶೆಂ ಸಫಿದ್ದೀನ್ ಸಾವನ್ನಪ್ಪಿದ್ದಾನೆ ಎಂದು ಇಸ್ರೇಲ್ ಭದ್ರತಾ ಪಡೆ (IDF) ಖಚಿತಪಡಿಸಿದೆ.
ಈ ಕುರಿತಾಗಿ ಮಾಧ್ಯಮಗಳಿಗೆ ಪ್ರಕಟಣೆ ನೀಡಿರುವ ಇಸ್ರೇಲ್ ಭದ್ರತಾ ಪಡೆ, ‘ಕಳೆದ ಮೂರು ವಾರಗಳಿಂದ ನಾವು ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ಉಗ್ರ ಸಂಘಟನೆ ವಿರುದ್ಧ ನಿರಂತರ ಸಮರ ನಡೆಸುತ್ತಿದ್ದೇವೆ.
ಇದೀಗ ನಾವು ಹೆಜ್ಬೊಲ್ಲಾ ಉಗ್ರ ಸಂಘಟನೆಯ ಕಾರ್ಯಕಾರಿಯ ಮಂಡಳಿಯ ಮುಖ್ಯಸ್ಥನಾಗಿದ್ದ ಹಾಶೆಂ ಸಫಿದ್ದೀನ್ನನ್ನು ಹತ್ಯೆ ಮಾಡಿರೋದಾಗಿ ಖಚಿತಪಡಿಸುತ್ತಿದ್ದೇವೆ’ ಎಂದು ಹೇಳಿದೆ.
ಇಸ್ರೇಲ್ ಸೇನೆ ನೀಡಿರುವ ಮಾಹಿತಿಯನ್ನು ಹೆಜ್ಬೊಲ್ಲಾ ಉಗ್ರ ಸಂಘಟನೆ ಇನ್ನೂ ಖಚಿತಪಡಿಸಿಲ್ಲ. ಇಸ್ರೇಲ್ ಸೇನೆ ಹೆಜ್ಬೊಲ್ಲಾ ಉಗ್ರ ಸಂಘಟನೆಯ ಎರಡನೇ ಹಂತದ ನಾಯಕ ಹಾಶೆಂ ಸಫಿದ್ದೀನ್ನನ್ನು ಹತ್ಯೆ ಮಾಡಿದೆ ಎಂಬರ್ಥದ ಹೇಳಿಕೆಯನ್ನು ಅಕ್ಟೋಬರ್ 8 ರಂದೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದರು.
ಆದರೆ, ಅವರು ಅಂದು ಹಾಶೆಂ ಸಫಿದ್ದೀನ್ ಹೆಸರನ್ನು ಪ್ರಸ್ತಾಪ ಮಾಡಿರಲಿಲ್ಲ. ಇದೀಗ ಇಸ್ರೇಲ್ ಸೇನೆ ಹಾಶೆಂ ಸಫಿದ್ದೀನ್ ಹತ್ಯೆಗೀಡಾಗಿದ್ದಾನೆ ಎಂದು ಹೇಳಿದೆ. ಈ ಮೂಲಕ ಹೆಜ್ಬೊಲ್ಲಾ ಉಗ್ರ ಸಂಘಟನೆ ವಿರುದ್ಧದ ಸಮರದಲ್ಲಿ ಭಾರೀ ಯಶಸ್ಸು ಸಾಧಿಸಿರೋದಾಗಿ ಹೇಳಿಕೊಂಡಿದೆ.
ಅಕ್ಟೋಬರ್ 8 ರಂದು ಮಾಧ್ಯಮಗಳ ಎದುರು ಮಾತನಾಡಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ನಾವು ಈವರೆಗೆ ಸಾವಿರಾರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ.
ಹೆಜ್ಬೊಲ್ಲಾ ಅಧಿನಾಯಕ ಹಸನ್ ನಸ್ರಲ್ಲಾ, ಆತನ ಉತ್ತರಾಧಿಕಾರಿ ಹಾಗೂ ಉತ್ತರಾಧಿಕಾರಿಯ ಉತ್ತರಾಧಿಕಾರಿಯನ್ನೂ ಹತ್ಯೆ ಮಾಡಿದ್ದೇವೆ ಎಂದು ನೆತನ್ಯಾಹು ಹೇಳಿಕೊಂಡಿದ್ದರು.
ಇದೀಗ ಮಂಗಳವಾರ ತಡ ರಾತ್ರಿ ಮಾಧ್ಯಮ ಪ್ರಕಟಣೆ ನೀಡಿರುವ ಇಸ್ರೇಲ್ ಸೇನೆ, ತನ್ನ ವಾಯು ಪಡೆ ನಡೆಸಿದ ಏರ್ ಸ್ಟ್ರೈಕ್‌ನಲ್ಲಿ ಮಹತ್ವದ ಯಶಸ್ಸು ಸಾಧಿಸಿರೋದಾಗಿ ತಿಳಿಸಿದೆ.
ಬೇಹುಗಾರಿಕಾ ಮಾಹಿತಿ ಆಧರಿತ ದಾಳಿ ಇದಾಗಿದ್ದು, ಹೆಜ್ಬೊಲ್ಲಾ ಉಗ್ರ ಸಂಘಟನೆಯ ಪ್ರಮುಖ ಬೇಹುಗಾರಿಕಾ ಮುಖ್ಯ ಕಚೇರಿಯನ್ನೇ ಉಡಾಯಿಸಿರೋದಾಗಿ ಹೇಳಿದೆ.
ಮೂಲಗಳ ಪ್ರಕಾರ ಇಸ್ರೇಲ್ ವಾಯು ದಾಳಿ ನಡೆಸುವ ವೇಳೆ ಹೆಜ್ಬೊಲ್ಲಾದ ಎರಡನೇ ಹಂತದ ನಾಯಕನ ಜೊತೆಯಲ್ಲೇ 25 ಭಯೋತ್ಪಾದಕರು ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.