ಕರ್ನಾಟಕದ (Karnataka) ಉದ್ಯೋಗಾಕಾಂಕ್ಷಿಗಳು ಇಸ್ರೇಲ್‌ನಲ್ಲಿ (Israel) ಉದ್ಯೋಗ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ. ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ (Passport) ಕಚೇರಿಯ ಪ್ರಕಾರ, ಈ ವರ್ಷ 2,200ಕ್ಕೂ ಹೆಚ್ಚು ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ಗಳನ್ನು ಇಸ್ರೇಲ್‌ಗಾಗಿ ನೀಡಲಾಗಿದೆ. ಇದು ಕಳೆದ ವರ್ಷ (1,576) ನೀಡಿದ ಪ್ರಮಾಣಪತ್ರಗಳ ಸಂಖ್ಯೆಯನ್ನು ಮೀರಿಸಿದೆ.
ಇಸ್ರೇಲ್ ಸರ್ಕಾರ ಕಳೆದ ಎರಡು ತಿಂಗಳ ಹಿಂದೆ 10,000 ಕಟ್ಟಡ ಕಾರ್ಮಿಕರು ಮತ್ತು 5,000 ಶುಶ್ರೂಷಕರಿಗೆ ಬೇಡಿಕೆ ಇಟ್ಟಿತ್ತು. ಇಸ್ರೇಲ್‌ನ ನಿರ್ಮಾಣ ವಲಯದಲ್ಲಿ ಭಾರತೀಯ ಕಾರ್ಮಿಕರಿಗೆ ಹೆಚ್ಚಿನ ಅವಶ್ಯಕತೆಯಿದ್ದು, ಈ ಹಿಂದೆ ಪ್ಯಾಲೆಸ್ತೀನಿಯರು ನಿರ್ವಹಿಸುತ್ತಿದ್ದ ಕೆಲಸಗಳಿಗೆ ಅವರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ಮುಂದುವರಿದಿದೆ.
“ಈ ವರ್ಷ ಇಸ್ರೇಲ್‌ಗೆ ತೆರಳಲು ಕರ್ನಾಟಕದ ಉದ್ಯೋಗಾಕಾಂಕ್ಷಿಗಳಿಗೆ 2,200 PCC (Police Clearance Certificates) ಗಳನ್ನು ನೀಡಲಾಗಿದೆ. ಇದು ಕಳೆದ ವರ್ಷಕ್ಕಿಂತ (1,576) ಗಣನೀಯ ಏರಿಕೆಯಾಗಿದೆ,” ಎಂದು ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ಕೃಷ್ಣ ಕೆ ತಿಳಿಸಿದ್ದಾರೆ.
ಇಸ್ರೇಲ್-ಹಮಾಸ್ ನಡುವಿನ ಸಂಘರ್ಷದ ನಂತರ, ಇಸ್ರೇಲ್‌ನಲ್ಲಿ ಉದ್ಯೋಗ ಅವಕಾಶಗಳಿಗಾಗಿ ಬೇಡಿಕೆ ಹೆಚ್ಚಾಗಿದೆ. ಈ ವರ್ಷದ ಮಿಕ್ಕ ದೇಶಗಳ ಪಿಸಿಸಿ ವಿವರಗಳನ್ನು ಗಮನಿಸಿದರೆ, ಕುವೈತ್‌ಗಾಗಿ 6,000, ಆಸ್ಟ್ರೇಲಿಯಾ 2,000, ಮತ್ತು ಯುಕೆಗೆ 1,382 ಪಿಸಿಸಿ ನೀಡಲಾಗಿದೆ. ಆದರೆ, ಯುಕೆಗೆ ಅರ್ಜಿಗಳಲ್ಲಿ ಕಳೆದ ವರ್ಷ ಹೋಲಿಸಿದರೆ ಕುಸಿತ ಕಂಡುಬಂದಿದೆ.
ಅಂಕಿಅಂಶಗಳ ಪ್ರಕಾರ, ಕರ್ನಾಟಕದ ಉದ್ಯೋಗಾಕಾಂಕ್ಷಿಗಳಿಗೆ ಪಶ್ಚಿಮ ಏಷ್ಯಾ ದೇಶಗಳೊಂದಿಗೆ ಇಸ್ರೇಲ್ ಒಂದು ಪ್ರಮುಖ ಗುರಿಯಾಗಿದ್ದು, ಪಾಸ್‌ಪೋರ್ಟ್ ಕಚೇರಿ ಬಲವಾಗಿ ಪೂರಕ ಸೇವೆ ಒದಗಿಸುತ್ತಿದೆ.