Chikkaballapur : ಕಾರ್ತಿಕ ಮಾಸದ ಕೊನೆಯ ಸೋಮವಾರದ ಪ್ರಯುಕ್ತ ಭಕ್ತರು ಬೆಳಗ್ಗೆಯಿಂದಲೇ ದೇಗುಲಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಧಾರ್ಮಿಕ ಸಡಗರದಲ್ಲಿ ಭಾಗವಹಿಸಿದರು.
ತಾಲ್ಲೂಕಿನ ನಂದಿ ಗ್ರಾಮದ ಭೋಗ ನಂದೀಶ್ವರ ದೇವಾಲಯ, ನಗರದ ಎಂ.ಜಿ. ರಸ್ತೆಯ ಮರುಳಸಿದ್ದೇಶ್ವರ ದೇವಾಲಯ, ಕಂದವಾರ ಬಾಗಿಲು ರಸ್ತೆಯ ವೆಂಕಟರಮಣ ಸ್ವಾಮಿ ದೇವಾಲಯ, ಕೋಟೆ ಚನ್ನಕೇಶವ ಸ್ವಾಮಿ ದೇವಾಲಯ, ವರಸಿದ್ಧಿ ವಿನಾಯಕ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.
ಮರುಳಸಿದ್ದೇಶ್ವರ ಮತ್ತು ಗಂಗಾಧರೇಶ್ವರ ದೇವಾಲಯಗಳಲ್ಲಿ ಸಾವಿರ ಲೀಟರ್ ಹಾಲಿನಿಂದ ಮಹಾ ಅಭಿಷೇಕ ನಡೆದಿದ್ದು, ಭಕ್ತರನ್ನು ಆಕರ್ಷಿಸಿತು.
ಧರ್ಮಛತ್ರ ರಸ್ತೆಯ ವಿದ್ಯಾಗಣಪತಿ, ಗಂಗಮ್ಮನಗುಡಿ ರಸ್ತೆಯ ಜಾಲಾರಿ ಗಂಗಮ್ಮ, ಕೋದಂಡರಾಮ ಸ್ವಾಮಿ, ವಾಪಸಂದ್ರದ ನಿಡುಮಾಮಿಡಿ ಮಠ, ಎಚ್.ಎಸ್. ಗಾರ್ಡನ್‌ನ ಸುಬ್ರಮಣೇಶ್ವರ, ಶನೇಶ್ವರ ಮತ್ತು ಶಿರಡಿ ಸಾಯಿ ಬಾಬಾ ದೇವಾಲಯಗಳಲ್ಲಿ ದಿನವಿಡೀ ಸಂಭ್ರಮ ಮನೆ ಮಾಡಿತ್ತು.
ದೇವಸ್ಥಾನಗಳಲ್ಲಿ ಬೆಳಗ್ಗೆ ವಿಶೇಷ ಅಭಿಷೇಕ, ಮಹಾ ಮಂಗಳಾರತಿ ಮತ್ತು ಪೂಜೆ ನಡೆಯಿತು. ಅನೇಕ ಕಡೆಗಳಲ್ಲಿ ಪ್ರಸಾದ ವಿತರಣಾ ಕಾರ್ಯಕ್ರಮ ಮತ್ತು ಭಕ್ತಿ ಸಂಗೀತೋತ್ಸವ ಆಯೋಜಿಸಲಾಗಿತ್ತು. ದೇವಾಲಯಗಳು ವಿದ್ಯುತ್ ದೀಪಗಳಿಂದ ಅಲಂಕರಿಸಲ್ಪಟ್ಟು ಕಂಗೊಳಿಸುತ್ತಿದ್ದವು.
ಭೋಗ ನಂದೀಶ್ವರ ದೇವಾಲಯದಲ್ಲಿ ಭಕ್ತರ ದಟ್ಟಣೆ ಪೂರ್ಣ ದಿನವಾಗಿತ್ತು. ಭೋಗ ನಂದೀಶ್ವರ, ಅರುಣಾಚಲೇಶ್ವರ, ಉಮಾಮಹೇಶ್ವರ ಮತ್ತು ಗಿರಿಜಾ ಮಾತೆಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇಗುಲದ ಒಳಗೆ ದೀಪ ಹೊತ್ತಿಸಲು ಅವಕಾಶ ಇರಲಿಲ್ಲ. ಆದರೂ ಭಕ್ತರು ದೇಗುಲದ ಹೊರಭಾಗದಲ್ಲಿ ಹಣತೆಯನ್ನು ಹೊತ್ತಿಸಿ ದೀಪೋತ್ಸವಕ್ಕೆ ಹೊಸ ಮೆರುಗು ನೀಡಿದರು.
ಮಹಿಳೆಯರು ಎಲೆಯ ಮೇಲೆ ಅಕ್ಕಿ, ಬೆಲ್ಲ, ಬಾಳೆಹಣ್ಣು ಇಟ್ಟು ದೇವರಿಗೆ ನೈವೇದ್ಯ ಸಮರ್ಪಿಸಿ ದೀಪ ಹಚ್ಚಿ ಪ್ರಾರ್ಥಿಸಿದರು. ಸಂಜೆಯಾದಂತೆ, ಕುಟುಂಬ ಸಮೇತರಾಗಿ ದೇಗುಲಗಳಿಗೆ ಆಗಮಿಸಿದ ಭಕ್ತರು ತಮ್ಮ ಶಕ್ತಾನುಸಾರ ದೇವರಿಗೆ ದೀಪ ಬಲಿತೊಡಿದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
For Daily Updates WhatsApp ‘HI’ to 7406303366
The post ಕಾರ್ತಿಕ ಸೋಮವಾರದ ಸಂಭ್ರಮ: ದೇಗುಲಗಳಲ್ಲಿ ವಿಶೇಷ ಪೂಜೆ, ಅಭಿಷೇಕ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.