Vijayapura, Devanahalli : “ಕನ್ನಡ ಯಾವುದೇ ಮತ ಅಥವಾ ಪಂಥದ ಭಾಷೆಯಲ್ಲ, ಅದು ನಮ್ಮ ಮಣ್ಣಿನ ಭಾಷೆ. ಭೌಗೋಳಿಕ ಮತ್ತು ಆಡಳಿತಾತ್ಮಕ ಏಕೀಕರಣ ಮಾತ್ರವಲ್ಲ, ಕನ್ನಡ ಹೃದಯಗಳ ಏಕೀಕರಣವೂ ಅಗತ್ಯ,” ಎಂದು ಬಯಪ ಅಧ್ಯಕ್ಷ ವಿ. ಶಾಂತಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಹೋಬಳಿಯ ನಾರಾಯಣಪುರದಲ್ಲಿ ಮಂಗಳವಾರ ನಡೆದ ಸಾಯಿ ಸಮೂಹ ವಿದ್ಯಾಸಂಸ್ಥೆಗಳ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಕನ್ನಡ ಭಾಷೆ ನಮ್ಮ ಸಂಸ್ಕೃತಿ, ಸಂಸ್ಕಾರ, ಮತ್ತು ಸಂಬಂಧಗಳ ಪ್ರತೀಕವಾಗಿದೆ. ಇದನ್ನು ಮುಂದಿನ ಪೀಳಿಗೆಗಳಿಗೆ ಮುಂದುವರಿಸುವ ಜವಾಬ್ದಾರಿ ನಮ್ಮೆಲ್ಲರದು,” ಎಂದು ಶಾಂತಕುಮಾರ್ ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ. ರಾಜಣ್ಣ, “ಹರಿದು ಹಂಚಿಹೋಗಿದ್ದ ಕನ್ನಡ ಪ್ರದೇಶಗಳನ್ನು ಒಂದಾಗಿಸಿದ ಮಹನೀಯರನ್ನು ಪ್ರತಿನಿತ್ಯ ಸ್ಮರಿಸಬೇಕು. ಕವಿಗಳು, ದಾಸರು, ಶರಣರು ನಮಗೆ ಮಾರ್ಗದರ್ಶಕರು,” ಎಂದು ಹೇಳಿದರು.
ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುರಳೀಧರ್, “ಮಹಾನಗರಗಳಲ್ಲಿ ಕನ್ನಡಿಗರು ಪರಕೀಯರಂತೆ ಬದುಕಬೇಕಾದ ಪರಿಸ್ಥಿತಿ ಬೇಸರಕ್ಕೀಡಾಗಿದೆ,” ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ನೃತ್ಯದ ಮೂಲಕ ಕಾರ್ಯಕ್ರಮವನ್ನು ಸಾಂಸ್ಕೃತಿಕ ವೈಭವದಿಂದ ಭರಿತಗೊಳಿಸಿದರು
ರಾಜ್ಯೋತ್ಸವದ ಅಂಗವಾಗಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಾಯಿ ವಿದ್ಯಾಸಂಸ್ಥೆಗಳ ಅಧ್ಯಕ್ಷ ಬಿ. ಮಂಜುನಾಥ್, ಡಿ. ಆರ್. ಬಾಲಕೃಷ್ಣ, ಬಿಜ್ಜವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್. ಮಹದೇವಪ್ಪ, ಹಾರೋಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಾದೇವಿ ಮಂಜುನಾಥ್, ಪಿ. ಎಂ. ಕೊಟ್ರೇಶ್, ಬಿ. ಕೆ. ನಾರಾಯಣಸ್ವಾಮಿ, ಮುನಿರಾಜು, ಮತ್ತು ಪ್ರೊ. ಎನ್. ಶ್ರೀನಿವಾಸಮೂರ್ತಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.