China : ತೈವಾನ್ ರಕ್ಷಣಾ ಸಚಿವಾಲಯವು (Taiwan’s Ministry of Defense) ಈಸ್ಟರ್ನ್, ಉತ್ತರ, ಮತ್ತು ದಕ್ಷಿಣ ಥಿಯೇಟರ್ ಕಮಾಂಡ್‌ಗಳ ಮೂಲಕ ಚೈನೀಸ್ ಪೀಪಲ್ಸ್ ಲಿಬರೇಶನ್ ಆರ್ಮಿ (People’s Liberation Army-PLA) ನೌಕೆಗಳನ್ನು ಗುರುತಿಸಿದೆ ಎಂದು ಹೇಳಿದೆ. ಜೊತೆಗೆ ಚೀನಾದ ಕರಾವಳಿ ಕಾವಲು ಹಡಗುಗಳು ತೈವಾನ್ ಪ್ರದೇಶಗಳಿಗೆ ಪ್ರವೇಶಿಸುತ್ತಿವೆ ಎಂದು ಸಿಎನ್ಎನ್ ವರದಿ ಮಾಡಿದೆ.
ಉಕ್ರೇನ್, ಪ್ಯಾಲೆಸ್ತೀನ್, ಸಿರಿಯಾದಲ್ಲಿ ಯುದ್ಧ ನಡೆಯುತ್ತಿರುವ ನಡುವೆಯೇ, ತೈವಾನ್ ಮತ್ತು ಚೀನಾ ನಡುವಿನ ಸಂಘರ್ಷದ ಭೀತಿ ಹೆಚ್ಚಾಗಿದೆ. ತೈವಾನ್ ಪರಿಸರದಲ್ಲಿ ಚೀನಾದ 90ಕ್ಕೂ ಹೆಚ್ಚು ನೌಕೆಗಳು ಮತ್ತು ಕರಾವಳಿ ಹಡಗುಗಳು ನಿಯೋಜಿತವಾಗಿವೆ.
ಚೀನಾದ ಈ ನೌಕಾ ಚಟುವಟಿಕೆ ತೈವಾನ್ ಅಧ್ಯಕ್ಷ ಲಾಯ್ ಚಿಂಗ್-ಟೆ ಅವರ ಹವಾಯಿ ಪ್ರವಾಸ ಮತ್ತು ಅಮೆರಿಕದ ಜತೆಗಿನ ಶಸ್ತ್ರಾಸ್ತ್ರ ಮಾತುಕತೆಗಳ ನಂತರ ಸಂಭವಿಸಿದೆ. ಚೀನಾ ಸರ್ಕಾರವು ಲಾಯ್ ಅವರನ್ನು “ಪ್ರತ್ಯೇಕತಾವಾದಿ” ಎಂದು ಕರೆದಿದ್ದು, ತೀವ್ರ ವಿರೋಧ ವ್ಯಕ್ತಪಡಿಸಿದೆ.
ತೈವಾನ್ ಮೇಲೆ ಚೀನಾ ಈ ಹಿಂದೆ ಹಲವು ಬಾರಿ ಮಿಲಿಟರಿ ವ್ಯಾಯಾಮಗಳನ್ನು ನಡೆಸಿದೆ. ಈ ಬಾರಿ, ತೈವಾನ್ ನೌಕಾ ಚಟುವಟಿಕೆಗೆ ತುರ್ತು ಪ್ರತಿಕ್ರಿಯೆ ನೀಡಿದ್ದು, ಎಚ್ಚರಿಕೆಯ ಮಟ್ಟವನ್ನು ಹೆಚ್ಚಿಸಿದೆ. ಈ ಬಿಕ್ಕಟ್ಟು ವಿಶ್ವದ ಪ್ರಮುಖ ಆರ್ಥಿಕ ಮತ್ತು ರಾಜಕೀಯ ಸಾಂದರ್ಭಿಕತೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.