Chamarajanagar: ಕೊಳ್ಳೇಗಾಲದ ಮಾಜಿ ಶಾಸಕ ಎಸ್. ಜಯಣ್ಣ (Former Kollegal MLA S. Jayanna) ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. 1994ರಲ್ಲಿ ಜನತಾದಳ ಮತ್ತು 2013ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಅವರು ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿದ್ದರು.
ಎಸ್. ಜಯಣ್ಣ (MLA S. Jayanna) ಅವರನ್ನು ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. 72 ವರ್ಷ ವಯಸ್ಸಿನ ಜಯಣ್ಣ ಅವರು ಮೈಸೂರಿಗೆ ಆಹ್ವಾನ ಪತ್ರಿಕೆ ನೀಡಲು ಹೋಗುವ ವೇಳೆ ಉತ್ತಂಬಳ್ಳಿ ಬಳಿ ಹೃದಯಾಘಾತಕ್ಕೆ ಒಳಗಾದರು. ಜಯಣ್ಣ ಅವರ ಅಂತ್ಯಕ್ರಿಯೆ ನಾಳೆ ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ನಡೆಯಲಿದೆ.
ಕಳೆದ ನವೆಂಬರ್ 7ರಂದು ಸಿಎಂ ಸಿದ್ದರಾಮಯ್ಯ ಅವರೇ ಜಯಣ್ಣ ಅವರ ನೂತನ ಮನೆಯ ನಾಮಫಲಕವನ್ನು ಅನಾವರಣ ಮಾಡಿದ್ದರು. ಗೃಹ ಪ್ರವೇಶ ಕಾರ್ಯಕ್ರಮದ ಆಹ್ವಾನ ನೀಡಲು ತೆರಳುವ ಸಂದರ್ಭದಲ್ಲೇ ಅವರೀಗ ವಿಧಿವಶರಾಗಿದ್ದಾರೆ.
ಈ ವರ್ಷ ಮಾರ್ಚ್ ತಿಂಗಳಿನಲ್ಲಿ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ್ದ ಜಯಣ್ಣ, ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಜನ ಸೇವೆ ಮಾಡಲು ಅವಕಾಶ ಕೊಟ್ಟಿದ್ದಾರೆ, ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಈ ಅಧಿಕಾರವನ್ನು ಸದ್ಬಳಕ್ಕೆ ಮಾಡಿಕೊಂಡು ಜನರ ಕೆಲಸಗಳನ್ನು ಮಾಡಿಕೊಡುತ್ತೇನೆ ಎಂದು ಹೇಳಿದ್ದರು.