Islamabad: ಪಾಕಿಸ್ತಾನ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ (Pakistan International Airlines-PIA) ಏಳು ವರ್ಷಗಳ ವಿರಾಮದ ನಂತರ ಅಮೆರಿಕಕ್ಕೆ ತನ್ನ ವಿಮಾನಯಾನವನ್ನು ಪುನಾರಂಭಿಸಲು ಸಜ್ಜಾಗಿದೆ. ಇದು ಪಾಕಿಸ್ತಾನದ ವಾಯುಯಾನ ವಲಯಕ್ಕೆ ಪ್ರಮುಖ ಬೆಳವಣಿಗೆಯಾಗಿದೆ ಎಂದು ಅಧಿಕೃತ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.
ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (Federal Aviation Administration-FAA) ಜೊತೆಗೆ ಪಾಕಿಸ್ತಾನ ಎಫ್ಎಎಗೆ ಬಾಕಿ ಉಳಿದ ಹಣಕಾಸಿನ ಬಾಧ್ಯತೆಗಳನ್ನು ಇತ್ಯರ್ಥಗೊಳಿಸಲು ಒಪ್ಪಂದಕ್ಕೆ ಸಹಿ ಹಾಕಿದೆ. ಡಿಜಿ ಸಿಎಎ ನಾದಿರ್ ಶಾಫಿ ದಾರ್ ಅವರು ಶೀಘ್ರದಲ್ಲೇ ಪಾವತಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ.
ಫೆಬ್ರವರಿ ಅಥವಾ ಮಾರ್ಚ್‌ನೊಳಗೆ ಎಫ್ಎಎ ನಿಯೋಗವು ಪಾಕಿಸ್ತಾನಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ. ಈ ಬೆಳವಣಿಗೆಯು ಪಾಕಿಸ್ತಾನವನ್ನು ‘ವರ್ಗ 1’ ಸ್ಥಾನಮಾನಕ್ಕೆ ಮರುವರ್ಗೀಕರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಅಮೆರಿಕಕ್ಕೆ ನೇರ ವಿಮಾನಗಳ ಪುನಾರಂಭಕ್ಕೆ ದಾರಿ ಮಾಡಿಕೊಡುತ್ತದೆ.
2017ರಲ್ಲಿ PIAಯು ಅಮೆರಿಕಕ್ಕೆ ಹಾರಾಟವನ್ನು ಸ್ಥಗಿತಗೊಳಿಸಿತ್ತು. ಹಿಂದೆ, ನ್ಯೂಯಾರ್ಕ್‌ಗೆ ನಾಲ್ಕು ಮತ್ತು ಚಿಕಾಗೋಗೆ ಎರಡು ಸೇರಿ ವಾರಕ್ಕೆ ಆರು ವಿಮಾನ ಹಾರಾಟಗಳನ್ನು PIA ನಿರ್ವಹಿಸುತ್ತಿತ್ತು.
ಅಬುಧಾಬಿ ಮತ್ತು ಕತಾರ್ ದೇಶಗಳು PIA ಖಾಸಗೀಕರಣದ ಪ್ರಕ್ರಿಯೆಯಲ್ಲಿ ತೀವ್ರ ಆಸಕ್ತಿ ತೋರಿದ್ದು, ವಿದೇಶಿ ಹೂಡಿಕೆಗೆ ಅವಕಾಶವನ್ನು ಸೃಷ್ಟಿಸುತ್ತಿವೆ. ಪಾಕಿಸ್ತಾನದ ಸೆಕ್ಯುರಿಟೀಸ್ ಮತ್ತು ಎಕ್ಸೆಂಜ್ ಕಮಿಷನ್ ಹೂಡಿಕೆದಾರರಿಗೆ ಗಣನೀಯ ಪ್ರೋತ್ಸಾಹ ನೀಡಲು ಕ್ರಮ ಕೈಗೊಂಡಿದ್ದು, ಈ ಪ್ರಕ್ರಿಯೆಯು ಸುಗಮವಾಗಿ ನಡೆಯಲು ಸಹಾಯ ಮಾಡಲಿದೆ.
PIA ಖಾಸಗೀಕರಣ ಪ್ರಕ್ರಿಯೆಗೆ ಡಿಸೆಂಬರ್ 31 ಗಡುವು ನಿಗದಿಯಾಗಿದೆ. ಸರ್ಕಾರದಿಂದ ಸರ್ಕಾರಕ್ಕೆ (G2G) ಒಪ್ಪಂದಗಳ ಮೂಲಕ ಪ್ರಕ್ರಿಯೆ ತ್ವರಿತಗೊಳಿಸಲಾಗುತ್ತಿದೆ ಎಂದು ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ಸೇರಿಸಿದೆ.