ಆಕ್ರಮಿತ ಗೋಲನ್ ಹೈಟ್ಸ್ ನಲ್ಲಿ (Golan Heights) ಜನವಸತಿ ಬಡಾವಣೆಗಳನ್ನು ವಿಸ್ತರಿಸುವ ಇಸ್ರೇಲ್ (Israel) ಯೋಜನೆಯನ್ನು ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ (UAE-United Arab Emirates) ಮತ್ತು ಕತಾರ್ ತೀವ್ರವಾಗಿ ಖಂಡಿಸಿವೆ. ಈ ಯೋಜನೆ ಸಿರಿಯಾದ ಭದ್ರತೆ ಮತ್ತು ಸ್ಥಿರತೆಯನ್ನು ಹಾಳು ಮಾಡುತ್ತದೆ ಎಂದು ಸೌದಿ ವಿದೇಶಾಂಗ ಸಚಿವಾಲಯ ಹೇಳಿದೆ.
“ಇಸ್ರೇಲ್, ಸಿರಿಯಾದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಗೌರವಿಸಬೇಕು” ಎಂದು ಯುಎಇ ವಿದೇಶಾಂಗ ಸಚಿವಾಲಯ ಹೇಳಿದೆ. “ಆಕ್ರಮಿತ ಗೋಲನ್ ಹೈಟ್ಸ್ನ ಕಾನೂನಾತ್ಮಕ ಸ್ಥಿತಿಯನ್ನು ಬದಲಾಯಿಸಲು ಇಸ್ರೇಲ್ ನಡೆಸುವ ಯಾವುದೇ ಕ್ರಮಗಳನ್ನು ನಾವು ಖಂಡಿಸುತ್ತೇವೆ” ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕತಾರ್ ವಿದೇಶಾಂಗ ಸಚಿವಾಲಯವೂ ಇಸ್ರೇಲ್ ಕ್ರಮಗಳನ್ನು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ವ್ಯಾಖ್ಯಾನಿಸಿದೆ. “ಸಿರಿಯಾದ ಸ್ವಾತಂತ್ರ್ಯ ಮತ್ತು ಭೂಪ್ರದೇಶದ ಸಮಗ್ರತೆಗೆ ಅಚಲ ಬೆಂಬಲ ನೀಡುತ್ತೇವೆ” ಎಂದು ಕತಾರ್ ಪುನರುಚ್ಚರಿಸಿದೆ.
ಗೋಲನ್ ಹೈಟ್ಸ್ ನಲ್ಲಿ ಇಸ್ರೇಲ್ ಜನಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿಯೊಂದಿಗೆ ಹೊಸ ವಸಾಹತುಗಳ ಯೋಜನೆಗಳಿಗೆ ಇಸ್ರೇಲ್ ಸರ್ಕಾರ ಅನುಮೋದನೆ ನೀಡಿದೆ. ಇದರಲ್ಲಿ ವಿದ್ಯಾರ್ಥಿ ಗ್ರಾಮ ಸ್ಥಾಪನೆ, ಶಿಕ್ಷಣ ವ್ಯವಸ್ಥೆ ಅಭಿವೃದ್ಧಿ ಮತ್ತು ನವೀಕರಿಸಬಹುದಾದ ಇಂಧನ ಸೌಕರ್ಯಗಳ ಬಲವರ್ಧನೆ ಸೇರಿವೆ.
ಭಾನುವಾರ, ಇಸ್ರೇಲ್ ಸಿರಿಯಾದ ಟಾರ್ಟಸ್ ಕರಾವಳಿಯಲ್ಲಿ ತೀವ್ರ ವೈಮಾನಿಕ ದಾಳಿಗಳನ್ನು ನಡೆಸಿದೆ. 2012 ನಂತರ ನಡೆದ ಅತ್ಯಂತ ತೀವ್ರ ದಾಳಿಯಾಗಿ ಇದು ಗುರುತಿಸಲಾಗಿದೆ. ಸೈನಿಕ ತಾಣಗಳು, ಗೋದಾಮುಗಳು ಈ ದಾಳಿಯ ಗುರಿಯಾಗಿವೆ ಎಂದು ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.