RR ನಗರ ಬಿಜೆಪಿ ಶಾಸಕ ಮುನಿರತ್ನ (BJP MLA Munirathna) ಮೇಲೆ ಮೊಟ್ಟೆ ಎಸೆತ ಪ್ರಕರಣ ಸಂಬಂಧ ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಮುನಿರತ್ನ ನೀಡಿದ ದೂರು ಆಧರಿಸಿ ಈ ಪ್ರಕರಣ ದಾಖಲಿಸಲಾಗಿದೆ. ಮೊಟ್ಟೆ ಎಸೆತ ಹಲ್ಲೆ ಹಾಗೂ ಕೊಲೆ ಯತ್ನದ ಭಾಗವಾಗಿ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮೊಟ್ಟೆ ಎಸೆದ ಆರೋಪದ ಎದುರಾಳಿಗಳು ತಮ್ಮ ಮೇಲೆಯೇ ಗುಂಪು ಕಟ್ಟಿ ಹಲ್ಲೆ ಮಾಡಿದ್ದಾರೆ ಎಂದು ನಂದಿನಿ ಲೇಔಟ್ ಠಾಣೆಗೆ ಪ್ರತಿದೂರು ದಾಖಲಿಸಿದ್ದಾರೆ.
ವಿಶ್ವನಾಥ, ಕೃಷ್ಣಮೂರ್ತಿ ಮತ್ತು ಚಂದ್ರು ಎಂಬವರಿಗೆ ಈ ಪ್ರಕರಣದಲ್ಲಿ ಆರೋಪ ನಿಗದಿಯಾಗಿದ್ದು, ಘಟನಾ ಸ್ಥಳದಲ್ಲೇ ಅವರನ್ನು ಪೊಲೀಸರು ಬುಧವಾರ ವಶಕ್ಕೆ ಪಡೆದರು. ಘಟನೆಯ ನಂತರ ಮುನಿರತ್ನ ಆಸ್ಪತ್ರೆಗೆ ದಾಖಲಾಗಿದ್ದು, ಗುರುವಾರ ಬೆಳಗ್ಗೆ ಡಿಸ್ಚಾರ್ಜ್ ಆದರು.
ಆಸ್ಪತ್ರೆಯಿಂದ ಹೊರಬಂದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮುನಿರತ್ನ, ಪ್ರಸ್ತುತ ಚಿಕಿತ್ಸೆ ಪೂರ್ತಿಯಾಗಿದೆ ಎಂದು ತಿಳಿಸಿದರು. ಮುಂದಿನ ಹಂತದಲ್ಲಿ ಪೊಲೀಸ್ ವರ್ತನೆ ಮತ್ತು ಕಾಂಗ್ರೆಸ್ ನಾಯಕರ ಸಂಚು ಬಗ್ಗೆ ಮಧ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ವಿವರಿಸುವುದಾಗಿ ಹೇಳಿದರು.
ಮುನಿರತ್ನ ಬುಧವಾರ ಲಕ್ಷ್ಮೀದೇವಿ ನಗರ ವಾರ್ಡನ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆಯಿತು. ಕಾಂಗ್ರೆಸ್ ಕಾರ್ಯಕರ್ತರೇ ಈ ಕೃತ್ಯ ನಡೆಸಿದ್ದಾರೆಂದು ಮುನಿರತ್ನ ಆರೋಪಿಸಿದರು. ಜೊತೆಗೆ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಮಾಜಿ ಸಂಸದ ಡಿಕೆ ಸುರೇಶ್ ಸಂಚು ರೂಪಿಸಿದ್ದಾರೆ ಎಂಬ ಆರೋಪವನ್ನು ಮುಂದಿಟ್ಟಿದ್ದಾರೆ.