Bengaluru: ಅಧಿವೇಶನ ನಂತರ ತಮ್ಮ ಮೇಲೆ ನಡೆದ ಅಮಾನವೀಯ ವರ್ತನೆ ಮತ್ತು ಹಕ್ಕುಚ್ಯುತಿ ಕುರಿತು ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತುಗೊಳಿಸಲು ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ (C.T. Ravi) ಹೇಳಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ನೀಡಿದ ಹೇಳಿಕೆ ಸಂಬಂಧ ಬೆಳವಣಿಗೆಗಳು ನಡೆದಿದ್ದು, ಸಿ.ಟಿ. ರವಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರನ್ನು ಪಕ್ಷದ ನಾಯಕರು ಜತೆ ಭೇಟಿ ಮಾಡಿ ದೂರು ಸಲ್ಲಿಸಿದರು. ಈ ಸಂದರ್ಭದಲ್ಲಿ ಬೆಳಗಾವಿ ಪೊಲೀಸರು ತಮ್ಮನ್ನು ಇಡೀ ರಾತ್ರಿ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆಂದು ತಿಳಿಸಿದ್ದಾರೆ.
ಡಿ.19ರಂದು ತನ್ನ ಮೇಲೆ ನಿರ್ಜನ ಪ್ರದೇಶದಲ್ಲಿ ಎನ್ಕೌಂಟರ್ ಮಾಡಲೆಂದು ಯೋಜನೆ ಮಾಡಲಾಗಿತ್ತು. ಆದರೆ ಮಾಧ್ಯಮ ವಾಹನಗಳ ಹಿಂಬಾಲನೆಯಿಂದ ಆ ದುರುದ್ದೇಶ ವಿಫಲವಾಯಿತು. ತಮ್ಮ ಬಂಧನ ಕಾನೂನು ವಿರೋಧಿ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿರುವುದಾಗಿ ಹೇಳಿದರು.
ವಿ.ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿಯವರನ್ನು ಭೇಟಿ ಮಾಡಿದ ರವಿ, ಪ್ರಕರಣದ ಅನಿಯಮಿತತೆಯನ್ನು ಚರ್ಚಿಸಿದರು. ಸದನದ ಒಳಗಿನ ಘಟನೆ ಬಗ್ಗೆ ಅನುಮತಿ ಇಲ್ಲದೆ ಮೊಕದ್ದಮೆ ದಾಖಲಿಸಿರುವುದು ತಪ್ಪಾಗಿದೆ ಎಂದು ಟೀಕಿಸಿದರು.
ತಮ್ಮ ವಿರುದ್ಧ ಕ್ರಮ ತೆಗೆದುಕೊಂಡ ಪೊಲೀಸರ ವಿರುದ್ಧ ದೂರು ನೀಡಿ, ಸೂಕ್ತ ಭದ್ರತೆ ಒದಗಿಸಲು ಮನವಿ ಮಾಡಿದ್ದಾರೆ. ಘಟನೆ ಕುರಿತು ರಾಷ್ಟ್ರಪತಿ ಮತ್ತು ಕೇಂದ್ರ ಗೃಹ ಇಲಾಖೆಯ ಗಮನಕ್ಕೆ ತರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.