Bengaluru: ರಾಜ್ಯದ ಜನರ ಆರ್ಥಿಕ ಶಕ್ತಿ ಹೆಚ್ಚಿಸಲು ಮತ್ತು ಪ್ರಾದೇಶಿಕ ಅಸಮತೋಲನ ಅಸಮಾನತೆಯನ್ನು ನಿವಾರಿಸಲು IAS ಮತ್ತು IPS ಅಧಿಕಾರಿಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಕರೆ ನೀಡಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹೊಸ ವರ್ಷಕ್ಕೆ ಶುಭಾಶಯ ಕೋರಿ ಮಾತನಾಡಿದ ಸಿಎಂ, ಬದುಕಿನಲ್ಲಿ ಏಳು ಬೀಳು ಸಹಜ ಎಂದು ಹುರಿದುಂಬಿಸಿದರು. ಆತ್ಮವಿಶ್ವಾಸ ಕಳೆದುಕೊಳ್ಳದೆ ಪರಿಸ್ಥಿತಿಗಳನ್ನು ಧೈರ್ಯದಿಂದ ಎದುರಿಸಲು ಸಾಧ್ಯವಿದೆ ಎಂದರು.
IAS, IPS, IRS, IFS ಅಧಿಕಾರಿಗಳು ಕಾನೂನು ರಚನೆ ಹಾಗೂ ಜಾರಿಗೆ ನಿರಂತರ ನಿಗಾ ವಹಿಸಿ, ಸಮಾಜದ ಹಿತವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಅವರ ಕರ್ತವ್ಯಗಳು ಆಡಳಿತಾಂಗದ ಪ್ರಮುಖ ಭಾಗವಾಗಿದೆ ಎಂದರು.
ಸಮಾಜದ ಎಲ್ಲಾ ವರ್ಗಗಳಿಗೆ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಒದಗಿಸದಿದ್ದರೆ ರಾಜಕೀಯ ಸ್ವಾತಂತ್ರ್ಯ ಅರ್ಥಹೀನ ಎಂದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತುಗಳನ್ನು ಸಿಎಂ ಉಲ್ಲೇಖಿಸಿದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ದೇಶದ ಆರ್ಥಿಕ ಬಿಕ್ಕಟ್ಟಿನ ಕಾಲದಲ್ಲಿ ಹೊಸ ಚೈತನ್ಯ ನೀಡಿದಂತೆ, ನಮ್ಮ ರಾಜಕೀಯ ತತ್ವಗಳಾದ ಸಮಾನತೆ, ಜಾತ್ಯತೀತತೆ, ಹಾಗೂ ಸಾಮಾಜಿಕ ನ್ಯಾಯವನ್ನು ಜಾರಿಗೆ ತರುವ ಕೆಲಸ ನಡೆಯಬೇಕು ಎಂದರು. ಮಾಹಿತಿ ಹಕ್ಕು, ಆಹಾರ ಹಕ್ಕು, ಮತ್ತು ಶಿಕ್ಷಣ ಹಕ್ಕುಗಳನ್ನು ಕಡ್ಡಾಯಗೊಳಿಸಿ, ಸಮಾನತೆಯ ಕಡೆ ದೇಶವನ್ನು ಮುನ್ನಡೆಸುವ ಪ್ರಸ್ತಾಪ ಮಾಡಿದರು.