Davanagere: ಯತ್ನಾಳ್ ಅವರಂತಹ ವಿಕೃತ ಮನಸ್ಸಿನ ವ್ಯಕ್ತಿಯನ್ನು ನಾನು ನೋಡಿಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ (M.P. Renukacharya) ವಾಗ್ದಾಳಿ ನಡೆಸಿದ್ದಾರೆ. ರಮೇಶ್ ಜಾರಕಿಹೊಳಿ ಒಳ್ಳೆಯ ಮನುಷ್ಯ, ಆದರೆ ಯತ್ನಾಳ್ ಅವರಿಂದ ಅವರು ಕೂಡ ಹಾಳಾಗಿದ್ದಾರೆ. ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದವರನ್ನು ಪ್ರಚೋದನೆ ಮಾಡಿದ್ದು ಯತ್ನಾಳ್ ಅವರ ಕೆಲಸ ಎಂದು ಅವರು ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಯತ್ನಾಳ್ ಅವರು ಹಿಂದೆಯೂ ಹೀಗೆಯೇ ಮಾತನಾಡಿ ಪಕ್ಷದಿಂದ ಉಚ್ಛಾಟನೆಗೊಂಡಿದ್ದರು. ಆದರೆ ಯಡಿಯೂರಪ್ಪನವರು ಅವರನ್ನು ಮತ್ತೆ ಕರೆತಂದರು. ಯತ್ನಾಳ್ ಅವರು ಗೋಮುಖ ವ್ಯಾಘ್ರ ಎಂದು ತೀವ್ರವಾಗಿ ಟೀಕಿಸಿದರು.
ಬಸನಗೌಡ ಯತ್ನಾಳ್ ಅಥವಾ ರಮೇಶ್ ಜಾರಕಿಹೊಳಿಗೆ ಬಿಎಸ್‌ವೈ ಕುರಿತು ಮಾತನಾಡುವ ನೈತಿಕತೆ ಇಲ್ಲ ಎಂದು ಅವರು ಕಿಡಿಕಾರಿದರು. ವಿಜಯೇಂದ್ರ ಜಾರಕಿಹೊಳಿಗೆ ಧಮ್ಕಿ ಹಾಕಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದರು.
2ಎ ಮೀಸಲಾತಿ ವಿಚಾರದಲ್ಲಿ ಯತ್ನಾಳ್ ಪರಮಪೂಜ್ಯರಿಗೆ ಅವಮಾನ ಮಾಡಿದ್ದು ಸಮಾಜಕ್ಕೆ ನುಂಗಲಾಗದ ವಿಷಯವಾಗಿದೆ ಎಂದು ಹೇಳಿದ್ದಾರೆ. ಯತ್ನಾಳ್ ಸಮಯಕ್ಕೆ ತಕ್ಕಂತೆ ಏಕಪಾತ್ರಾಭಿನಯ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.
“ನೀನು ನಮ್ಮ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದೀಯ. ನಿನ್ನಿಂದ ಪಕ್ಷ ಗೆಲ್ಲಲು ಸಾಧ್ಯವಿಲ್ಲ. ಬಿಎಸ್‌ವೈ, ಬಿವೈವಿ ಇದ್ದರೆ ಜನ ಕುಣಿತಾರೆ, ಆದರೆ ನೀನು ಗೆಲ್ಲಲು ನೈತಿಕತೆ ಇಲ್ಲ” ಎಂದು ರೇಣುಕಾಚಾರ್ಯ ತೀವ್ರ ವಾಗ್ದಾಳಿ ನಡೆಸಿದರು.