ಟರ್ಕಿಯಲ್ಲಿ (Turkey) ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ಕನಿಷ್ಠ 66 ಮಂದಿ ಮೃತಪಟ್ಟಿದ್ದಾರೆ ಮತ್ತು 32 ಮಂದಿ ಗಾಯಗೊಂಡಿದ್ದಾರೆ. ಬೋಲು ಪ್ರಾಂತ್ಯದ ಕಾರ್ಟಲ್ಕಾಯಾ ರೆಸಾರ್ಟ್ ನ (Kartalkaya resort) 12 ಅಂತಸ್ತಿನ ಗ್ರ್ಯಾಂಡ್ ಕಾರ್ತಲ್ ಹೋಟೆಲ್ ಬೆಂಕಿಗೆ ಆಹುತಿಯಾಗಿದೆ.
ಬೆಳಗಿನ ಜಾವ 3:30ರ ಸುಮಾರಿಗೆ ಹೋಟೆಲ್ ರೆಸ್ಟೋರೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಬೆಂಕಿಯ ಸ್ಪಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ. ಹೋಟೆಲ್ ನಲ್ಲಿ 234 ಅತಿಥಿಗಳು ಇದ್ದರು. ಬೆಂಕಿ ಹರಡುತ್ತಿದ್ದಂತೆ, ಇಬ್ಬರು ಭಯದಿಂದ ಕಟ್ಟಡದಿಂದ ಹಾರಿ ಸಾವನ್ನಪ್ಪಿದರು. ಕೆಲವರು ಬೆಡ್ಶೀಟ್ ಬಳಸಿಕೊಂಡು ಕೆಳಗೆ ಇಳಿಯಲು ಪ್ರಯತ್ನಿಸಿದರು. ಬದುಕುಳಿದವರು ತಮ್ಮ ಭಯಾನಕ ಅನುಭವಗಳನ್ನು ಹಂಚಿಕೊಂಡಿದ್ದಾರೆ.
30 ಅಗ್ನಿಶಾಮಕ ವಾಹನಗಳು ಮತ್ತು 28 ಆಂಬ್ಯುಲೆನ್ಸ್ ಗಳನ್ನು ಸ್ಥಳಕ್ಕೆ ಕಳುಹಿಸಲಾಗಿದ್ದು, ರೆಸಾರ್ ನಲ್ಲಿದ್ದ ಇತರ ಹೋಟೆಲ್ ಅತಿಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.
ಇದು ಇಸ್ತಾನ್‌ಬುಲ್‌ನಿಂದ 300 ಕಿಲೋಮೀಟರ್ ದೂರದಲ್ಲಿರುವ ಜನಪ್ರಿಯ ಸ್ಕೀ ರೆಸಾರ್ಟ್ ಆಗಿದ್ದು, ಅವಘಡದ ಸಮಯದಲ್ಲಿ ಹೆಚ್ಚಿನ ಹೋಟೆಲ್ ಗಳು ಜನರಿಂದ ತುಂಬಿದ್ದವು.
ಹೋಟೆಲ್ ಹೊಗೆಯಿಂದ ಆವೃತಗೊಂಡಿದ್ದು, ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು ಬೆಳಕಿನಲ್ಲಿ ಹೆಚ್ಚಿನ ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿದ್ದಾರೆ.