ಕಾಂಗ್ರೆಸ್ ಸಂಸದ ರಾಕೇಶ್ ರಾಥೋಡ್ (Congress MP Rakesh Rathod) ಅವರನ್ನು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ. ಅವರು ಲೋಹರ್ಬಾಗ್‌ನಲ್ಲಿರುವ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿರುವಾಗ, ಕೊತ್ವಾಲಿ ಪೊಲೀಸರು ಆಗಮಿಸಿ ಬಂಧಿಸಿದರು. ನಂತರ, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಸಂಸದರ ಬಂಧನದ ನಂತರ, ನ್ಯಾಯಾಲಯದ ಆವರಣದಲ್ಲಿ ಗದ್ದಲ ಉಂಟಾಯಿತು. ಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿ, ಜೈಲಿಗೆ ಕಳುಹಿಸುವ ಆದೇಶ ನೀಡಿದೆ. ಜನವರಿ 17 ರಂದು ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಾಗಿತ್ತು.
ಸಂಸದರು ನಿರೀಕ್ಷಣಾ ಜಾಮೀನು ಪಡೆಯಲು ಜಿಲ್ಲೆಯ ಎಂಪಿಎಂಎಲ್ಎ ನ್ಯಾಯಾಲಯ ಹಾಗೂ ಲಕ್ನೋ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಹೈಕೋರ್ಟ್ ಕೂಡಾ ಅವರ ಜಾಮೀನಿನ ಅರ್ಜಿಯನ್ನು ತಿರಸ್ಕರಿಸಿದೆ.
ಸಂತ್ರಸ್ತೆ ತನ್ನ ದೂರಿನಲ್ಲಿ, ಸಂಸದ ರಾಥೋಡ್ ಮದುವೆಯ ಭರವಸೆ ನೀಡಿ ಹಲವು ವರ್ಷಗಳಿಂದ ತಮ್ಮ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದಾಳೆ. ತನ್ನ ದೂರನ್ನು ಮೌಲ್ಯಮಾಪನ ಮಾಡುವಂತೆ ಮಹಿಳೆ ಪೊಲೀಸರಿಗೆ ಕರೆ ರೆಕಾರ್ಡಿಂಗ್ ಮತ್ತು ಇತರ ಮಾಹಿತಿಗಳನ್ನು ಸಲ್ಲಿಸಿದ್ದಾಳೆ.