ಬೆಂಗಳೂರು ಸಂಚಾರ ಪೊಲೀಸರು (Traffic Police) ನಗರದಲ್ಲಿ ಸುರಕ್ಷಿತ ಮತ್ತು ಸುಗಮ ಸಂಚಾರಕ್ಕಾಗಿ ಅಸ್ತ್ರಂ (AsTraM) ಆ್ಯಪ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಆ್ಯಪ್ ಮೂಲಕ ನೈಜ ಸಮಯದ ಸಂಚಾರ ದಟ್ಟಣೆ ಮಾಹಿತಿ, ಅಪಘಾತ ವರದಿ, ನಿಯಮ ಉಲ್ಲಂಘನೆ ಮಾಹಿತಿ ಮತ್ತು ಆನ್ಲೈನ್ ಮೂಲಕ ದಂಡ ಪಾವತಿ ಮಾಡುವ ಸೌಲಭ್ಯ ಲಭ್ಯವಿದೆ. ಗೃಹ ಸಚಿವ ಜಿ. ಪರಮೇಶ್ವರ ಅವರು ಈ ಮೊಬೈಲ್ ಆ್ಯಪ್ ಅನ್ನು ಗುರುವಾರ ಲೋಕಾರ್ಪಣೆ ಮಾಡಿದರು.
ಅಸ್ತ್ರಂ ಆ್ಯಪ್ ಉಪಯೋಗಗಳು
- ಸಂಚಾರ ದಟ್ಟಣೆ ಸ್ಥಿತಿಯನ್ನು ಮುಂಚಿತವಾಗಿ ತಿಳಿದುಕೊಳ್ಳಲು ಸಹಾಯ.
- ಬದಲಿ ಮಾರ್ಗಗಳ ಮಾಹಿತಿ ನೀಡುವ ವ್ಯವಸ್ಥೆ.
- ರಸ್ತೆ ಅಪಘಾತಗಳ ಮಾಹಿತಿ ಮತ್ತು ವರದಿ ಸಲ್ಲಿಸುವ ಆಯ್ಕೆ.
- ಸಂಚಾರ ನಿಯಮ ಉಲ್ಲಂಘನೆ, ದಂಡ ಪಾವತಿ ಮತ್ತು ಸಲಹೆಗಳ ಬಗ್ಗೆ ತ್ವರಿತ ಮಾಹಿತಿ.
- ತುರ್ತು ಪರಿಸ್ಥಿತಿಗಳಿಗೆ SOS ವೈಶಿಷ್ಟ್ಯ, 5 ಕಿಮೀ ವ್ಯಾಪ್ತಿಯ ರಸ್ತೆ ದಟ್ಟಣೆ ನೈಜ ಮಾಹಿತಿಯನ್ನು ಒದಗಿಸುವ ವ್ಯವಸ್ಥೆ.
ಜಿ. ಪರಮೇಶ್ವರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ “ನಗರ ಸಂಚಾರ ಸವಾಲುಗಳು ಮತ್ತು ಪೊಲೀಸರ ಪಾತ್ರ” ಕುರಿತು ಸಂವಾದ ನಡೆಸಿದರು. ಮಾಧ್ಯಮ ಪ್ರತಿನಿಧಿಗಳು ಸಂಚಾರ ಸುಧಾರಣೆ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಸಲಹೆಗಳನ್ನು ನೀಡಿದರು. ಬೆಂಗಳೂರು ಸಂಚಾರಿ ಪೊಲೀಸ್ ಇಲಾಖೆ ಅತ್ಯಾಧುನಿಕ ತಂತ್ರಜ್ಞಾನಗಳ ಪ್ರದರ್ಶನ ಮಾಡಿದ್ದು, “ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್” ವೀಕ್ಷಣೆಯಲ್ಲಿಯೂ ಭಾಗವಹಿಸಿದರು.
ಬೆಂಗಳೂರು ನಗರದಲ್ಲಿ 6000 ಸಂಚಾರ ಪೊಲೀಸರ ಪರಿಶ್ರಮ ಅಮೂಲ್ಯವಾಗಿದ್ದು, ಸಮರ್ಥ ಸಂಚಾರ ನಿರ್ವಹಣೆಗೆ ನಾಗರಿಕರ ಸಹಕಾರ ಅಗತ್ಯವಾಗಿದೆ. ನಿಯಮ ಪಾಲನೆಯ ಮೂಲಕ ದಟ್ಟಣೆಯಿಂದ ಮುಕ್ತಿ ಸಾಧ್ಯ ಎಂದು ಜಿ. ಪರಮೇಶ್ವರ ಹೇಳಿದ್ದಾರೆ.