Philadelphia: ಅಮೆರಿಕದಲ್ಲಿ (America) ಮತ್ತೊಂದು ವಿಮಾನ ಅಪಘಾತ ಸಂಭವಿಸಿದೆ. ಫಿಲಡೆಲ್ಫಿಯಾದಲ್ಲಿ ಸಣ್ಣ ವಿಮಾನವು ಟೇಕಾಫ್ ಆದ ಕೆಲವೇ ಸಮಯದಲ್ಲಿ ಪತನಗೊಂಡಿದೆ. ಶಾಪಿಂಗ್ ಮಾಲ್ ಸಮೀಪ ವಿಮಾನ ಪತನಗೊಂಡಿದ್ದು, ಭಾರೀ ಬೆಂಕಿ ಹೊತ್ತಿದೆ. ಅಪಘಾತದ ಸ್ಥಳದಲ್ಲಿ ಮನೆಗಳು ಮತ್ತು ಕಾರುಗಳು ಸುಟ್ಟು ಭಸ್ಮವಾಗಿವೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಘಟನೆಯಲ್ಲಿ ಹಲವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಪೆನ್ಸಿಲ್ವೇನಿಯ ಗವರ್ನರ್ ಜೋಶ್ ಶಾಪಿರೋ ಈ ಬೆಳವಣಿಗಿಯನ್ನು ದೃಢಪಡಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ವಿಮಾನ ನಿಲ್ದಾಣದಿಂದ ಸಂಜೆ 6:06 ಕ್ಕೆ ಸಣ್ಣ ಜೆಟ್ ಟೇಕ್ ಆಫ್ ಆಗಿದ್ದು, 1,600 ಅಡಿ (487 ಮೀಟರ್) ಎತ್ತರಕ್ಕೇರಿದ ನಂತರ 30 ಸೆಕೆಂಡುಗಳಲ್ಲಿ ವಿಮಾನ ರಾಡಾರ್ ನಿಂದ ಕಣ್ಮರೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.