ಬೆಂಗಳೂರು: ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸಹಿಸದ ಕಾಂಗ್ರೆಸ್, ಆದಿವಾಸಿ ಮೂಲದ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರನ್ನು ಹೇಗೆ ಸಹಿಸಿಕೊಳ್ಳುತ್ತದೆ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, “ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ದ್ರೌಪದಿ ಮುರ್ಮು ಅವರನ್ನು ‘ಬಡಪಾಯಿ ಮಹಿಳೆ’ ಎಂದು ಅಪಮಾನಿಸಿದ್ದು, ರಾಷ್ಟ್ರಪತಿ ಸ್ಥಾನದ ಘನತೆಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ. ಇದು ಭಾರತವನ್ನೂ ಅಪಮಾನಿಸುವ ಸಮಾನ” ಎಂದು ಟೀಕಿಸಿದ್ದಾರೆ.
“ನೆಹರು ಮನೆತನವು ಸ್ವಾತಂತ್ರ್ಯಾನಂತರ ದೇಶದ ಅಧಿಕಾರವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡು, ಪ್ರಜಾತಂತ್ರದಲ್ಲಿ ಸರ್ವಾಧಿಕಾರಿ ಆಡಳಿತ ನಡೆಸಿರುವ ಇತಿಹಾಸವಿದೆ. ಬಡವರು, ಹಿಂದುಳಿದವರು ಮತ್ತು ಆದಿವಾಸಿ ಸಮುದಾಯಗಳನ್ನು ತಮ್ಮ ಮತಬ್ಯಾಂಕ್ ಆಗಿ ಬಳಸಿದರೂ, ಅವರ ಶಿಕ್ಷಣ ಹಾಗೂ ರಾಜಕೀಯ ಹಕ್ಕುಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ” ಎಂದು ಅವರು ಆರೋಪಿಸಿದ್ದಾರೆ.
“ಶೋಷಿತ ಹಾಗೂ ಬುಡಕಟ್ಟು ಸಮುದಾಯಗಳು ಉನ್ನತ ಹುದ್ದೆ ಪಡೆಯುವುದನ್ನು ಸಹಿಸಲಾಗದ ಮನಸ್ಥಿತಿ ಸೋನಿಯಾ ಗಾಂಧಿಯವರ ಹೇಳಿಕೆಯಲ್ಲಿ ಸ್ಪಷ್ಟವಾಗಿದೆ. ಅವರು ಮತ್ತೊಬ್ಬ ಮಹಿಳೆಯನ್ನು ಹೀಯಾಳಿಸಿರುವುದು ಮಹಿಳಾ ಸಮುದಾಯವನ್ನೂ ಅಪಮಾನಿಸುವಂತಾಗಿದೆ” ಎಂದು ಹೇಳಿದ್ದಾರೆ.
“ಸೋನಿಯಾ ಗಾಂಧಿಯ ಹೇಳಿಕೆಯನ್ನು ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಳ್ಳುತ್ತಿರುವುದು ಅವರ ಭಂಡತನವನ್ನು ತೋರಿಸುತ್ತದೆ. ರಾಷ್ಟ್ರಪತಿಯನ್ನು ಅವಮಾನಿಸಿರುವ ಸೋನಿಯಾ ಗಾಂಧಿ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ, ಜನತೆ ಎದುರು ಕ್ಷಮೆ ಯಾಚಿಸಲಿ” ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.