ಫೆಬ್ರವರಿ 4, 2000 ರಂದು ಪ್ಯಾರಿಸ್ ನಲ್ಲಿ ನಡೆದ ವಿಶ್ವ ಶೃಂಗಸಭೆಯಲ್ಲಿ ಈ ದಿನವನ್ನು ಪ್ರಾರಂಭಿಸಲಾಯಿತು. ಇದನ್ನು ಯೂನಿಯನ್ ಫಾರ್ ಇಂಟರ್ ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ (UICC-Union for International Cancer Control) ಸ್ಥಾಪಿಸಿತ್ತು. ಅಂದಿನಿಂದ ಪ್ರತಿ ವರ್ಷ ಫೆಬ್ರವರಿ 4 ರಂದು ಈ ದಿನವನ್ನು ಪ್ರಪಂಚಾದ್ಯಾಂತ ಆಚರಿಸಲಾಗುತ್ತದೆ. ಈ ದಿನವು ಕ್ಯಾನ್ಸರ್ ರೋಗಿಗಳ ಜೀವನ ಗುಣಮಟ್ಟವನ್ನು ಸುಧಾರಿಸುವುದರಲ್ಲಿ ಮತ್ತು ಅದರ ಚಿಕಿತ್ಸೆ ಬಗ್ಗೆ ಜಾಗೃತಿ ಮೂಡಿಸುವುದರಲ್ಲಿ ಗಮನಹರಿಸುತ್ತದೆ.
ಉದ್ದೇಶ ಮತ್ತು ಮಹತ್ವ
ಈ ದಿನದ ಮೂಲ ಉದ್ದೇಶವು ಪ್ರಾರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಅನ್ನು ಪತ್ತೆಹಚ್ಚುವುದು ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡುವುದು. ಜಾಗೃತಿ ಅಭಿಯಾನಗಳು, ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ, ಎಲ್ಲಾ ಜನರು ಕ್ಯಾನ್ಸರ್ ಮುಕ್ತ ಆರೋಗ್ಯಕರ ಜೀವನ ನಡೆಸಲು ಪ್ರೇರಿತವಾಗುತ್ತಾರೆ. ಈ ದಿನದ ಆಚರಣೆಯಿಂದ, ನಾವು ಕ್ಯಾನ್ಸರ್ ಬಗ್ಗೆ ಸರಿಯಾದ ಜಾಗೃತಿ ಮೂಡಿಸಬಹುದು.
ಕ್ಯಾನ್ಸರ್ ರೋಗದ ವಿವರಗಳು
ಕ್ಯಾನ್ಸರ್‌ನಲ್ಲಿ 100 ಕ್ಕೂ ಹೆಚ್ಚು ವಿಧಗಳಿದ್ದು, ಕೆಲವು ಸಾಮಾನ್ಯವಾದ ಕ್ಯಾನ್ಸರ್‌ಗಳು, ಚರ್ಮದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್, ಮೆಲನೋಮ, ಕೊಲೊರೆಕ್ಟಲ್ ಕ್ಯಾನ್ಸರ್, ಲಿಂಫೋಮ ಕ್ಯಾನ್ಸರ್ ಮತ್ತು ಮೂತ್ರಪಿಂಡದ ಕ್ಯಾನ್ಸರ್. ಭಾರತದಲ್ಲಿ ಬಾಯಿ, ಗರ್ಭಾಶಯ ಮತ್ತು ಸ್ತನ ಕ್ಯಾನ್ಸರ್ ಹೆಚ್ಚು ಕಂಡು ಬರುತ್ತದೆ.