ಸ್ವೀಡನ್ ನ (Sweden) ಒರೆಬ್ರೊ ನಗರದಲ್ಲಿರುವ ಶಾಲೆಯ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಐವರು ಗಾಯಗೊಂಡಿದ್ದಾರೆ. ದಾಳಿಕೋರನ ಗುರುತು ಇನ್ನೂ ಪತ್ತೆಯಾಗಿಲ್ಲ, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಘಟನೆ ಬಳಿಕ ಶಾಲೆಯ ಭದ್ರತೆ ಹೆಚ್ಚಿಸಲಾಯಿತು. ಜನರು ಹತ್ತಿರ ಸೇರುವುದನ್ನು ನಿರ್ಬಂಧಿಸಲಾಗಿದೆ. ಭದ್ರತಾ ಕ್ರಮಗಳಲ್ಲಿ ಯಾವುದೇ ಹಸ್ತಕ್ಷೇಪ ಮಾಡಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಒಬ್ಬನೇ ಶಸ್ತ್ರಸಜ್ಜಿತ ವ್ಯಕ್ತಿ ಈ ದಾಳಿ ನಡೆಸಿದ್ದಾನೆ. ಇದರಲ್ಲಿ ಭಯೋತ್ಪಾದನೆ ಸಂಬಂಧವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ರಾಜಧಾನಿ Stockholmನಿಂದ 200 ಕಿಮೀ ದೂರದಲ್ಲಿ ಈ ದಾಳಿ ನಡೆದಿದ್ದು, ಇದು ಸ್ವೀಡನ್ನಿನ ಇತಿಹಾಸದಲ್ಲೇ ಭೀಕರ ಘಟನೆ ಎಂದು ಪ್ರಧಾನಿ ಉಲ್ಫ್ ಕ್ರಿಸ್ಟಿರ್ಸನ್ (Prime Minister Ulf Kristiansen) ಹೇಳಿದ್ದಾರೆ.
ದಾಳಿಕೋರ ತಾನೇ ತನ್ನನ್ನು ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವನಿಗೆ ಕ್ರಿಮಿನಲ್ ಹಿನ್ನೆಲೆ ಇಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳ ಪರಿಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.