Washington: ಭಾರತ ಮೂಲದ 22 ವರ್ಷದ ಆಕಾಶ್ ಬೋಬ್ಬಾ (Akash Bobba) ಅಮೆರಿಕದಲ್ಲಿ ಪ್ರಚಲಿತವಾಗಿದ್ದಾರೆ. ಇಲ್ಲಾನ್ ಮಸ್ಕ್ ಅವರ ನೇತೃತ್ವದ DOGE (ಸರ್ಕಾರಿ ಕಾರ್ಯಕ್ಷಮತೆ ಇಲಾಖೆ)ಗೆ ಆಯ್ಕೆಯಾದ ಆರು ಯುವ ಇಂಜಿನಿಯರ್‌ಗಳಲ್ಲಿ ಆಕಾಶ್ ಒಬ್ಬರು. ಇವರ ಆಯ್ಕೆ ಹಲವರನ್ನು ಅಚ್ಚರಿಗೊಳಿಸಿದ್ದರೆ, ಈ ಎಳಸು ಹುಡುಗರ ಕೈಗೆ ಹೇಗೆ ಇಟ್ಟಿದ್ದೀರಿ ಎಂದು ಹಲವರು ಟೀಕಿಸಿದ್ದಾರೆ.
DOGE ಇಲಾಖೆಗೆ ನೇಮಕಗೊಂಡವರ ಪೈಕಿ ಯಾರಿಗೂ ಸರಿಯಾಗಿ ಅನುಭವವಿಲ್ಲ, ಅವರ ವಯಸ್ಸು 19 ರಿಂದ 24 ವರ್ಷಗಳಷ್ಟೇ. ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದರೆ, ಕೆಲವರು ಮಸ್ಕ್ ಅವರ ನಿರ್ಧಾರವನ್ನು ದಿಟ್ಟ ಹೆಜ್ಜೆ ಎಂದು ಹೊಗಳಿದ್ದಾರೆ.
ಆಕಾಶ್ ಬೋಬ್ಬಾ ಅಮೆರಿಕದಲ್ಲಿ ಹುಟ್ಟಿ ಬೆಳೆದವರಾದರೂ, ಮೂಲತಃ ಭಾರತೀಯ. ಅವರು ಯುಸಿ ಬರ್ಕ್ಲಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಮೆಟಾ, ಪಲಂಟಿರ್, ಬ್ರಿಡ್ಜ್‌ವಾಟರ್ ಅಸೋಸಿಯೇಟ್ಸ್ ಕಂಪನಿಗಳಲ್ಲಿ ಇಂಟರ್ನ್ ಆಗಿ ಕೆಲಸ ಮಾಡಿದ್ದರು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಡಾಟಾ ಅನಾಲಿಟಿಕ್ಸ್ ಮತ್ತು ಫೈನಾನ್ಷಿಯಲ್ ಮಾಡಲಿಂಗ್‌ನಲ್ಲಿ ಪರಿಣಿತಿ ಹೊಂದಿದ್ದಾರೆ.
ಈತ ಒಬ್ಬ ಅಸಾಮಾನ್ಯ ಪ್ರತಿಭೆ. ಅವರ ಸಹಪಾಠಿಯೊಬ್ಬನ ಪ್ರಕಾರ, ತೀವ್ರ ಸಂಕಷ್ಟದ ವೇಳೆ ಆಕಾಶ್ ಒಂದು ರಾತ್ರಿಯಲ್ಲೇ ಸಂಪೂರ್ಣ ಕೋಡ್‌ಬೇಸ್ ಅನ್ನು ಹೊಸದಾಗಿ ಬರೆಯುವ ಮೂಲಕ ತಂಡವನ್ನು ಬಚಾವ್ ಮಾಡಿದ್ದರು. ಈ ಪ್ರತಿಭೆಯು ಈಗ DOGE ಇಲಾಖೆಯಲ್ಲಿ ಹೇಗೆ ಸ್ಪಂದಿಸುತ್ತದೆ ಎಂಬುದರ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.