Dehradun / Haldwani: 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ (National Games) ಕರ್ನಾಟಕದ ಆಧಿಪತ್ಯ ಮುಂದುವರಿದಿದೆ. ಮಂಗಳವಾರ ಮುಕ್ತಾಯಗೊಂಡ ಈಜು ಸ್ಪರ್ಧೆಯಲ್ಲಿ, ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಕರ್ನಾಟಕ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು. ಪ್ಯಾರಿಸ್ ಒಲಿಂಪಿಕ್ಸ್ ಸ್ಪರ್ಧಿ ಶ್ರೀಹರಿ ನಟರಾಜ್ ಮತ್ತು ಧಿನಿಧಿ ದೇಸಿಂಘು ತಲಾ 9 ಚಿನ್ನದ ಪದಕಗಳೊಂದಿಗೆ ತಮ್ಮ ಅಭಿಯಾನ ಮುಗಿಸಿದರು.
ಕೊನೆಯ ದಿನ, 14 ವರ್ಷದ ಧಿನಿಧಿ ಮಹಿಳೆಯರ 100 ಮೀ. ಫ್ರೀ ಸ್ಟೈಲ್ ಸ್ಪರ್ಧೆಯಲ್ಲಿ 57.34 ಸೆಕೆಂಡ್ಗಳಲ್ಲಿ ಗುರಿ ತಲುಪಿ ರಾಷ್ಟ್ರೀಯ ದಾಖಲೆ ನಿರ್ಮಿಸಿ ಚಿನ್ನ ಜಯಿಸಿದರು. ಪುರುಷರ 100 ಮೀ. ಫ್ರೀ ಸ್ಟೈಲ್ ಸ್ಪರ್ಧೆಯಲ್ಲಿ ಶ್ರೀಹರಿ ನಟರಾಜ್ 50.65 ಸೆಕೆಂಡ್ಗಳಲ್ಲಿ ಚಿನ್ನ ಗೆದ್ದರು. 4×100 ಮೀ. ಮೆಡ್ಲೆ ರಿಲೇಯಲ್ಲೂ ಅವರು ಚಿನ್ನದ ಸಾಧನೆ ಮಾಡಿದರು. ಈಜು ವಿಭಾಗದಲ್ಲಿ ಕರ್ನಾಟಕ ಒಟ್ಟು 37 ಪದಕಗಳೊಂದಿಗೆ ಚಾಂಪಿಯನ್ ಆಯಿತು.
ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲೂ ಕರ್ನಾಟಕ ಉಜ್ವಲ ಸಾಧನೆ ಮಾಡಿದೆ. ಪುರುಷರ ತಂಡ ಚಿನ್ನ ಜಯಿಸಿದ ಬಳಿಕ, ಪುರುಷ ಮತ್ತು ಮಹಿಳಾ ಡಬಲ್ಸ್ ವಿಭಾಗದಲ್ಲೂ ಚಿನ್ನದ ಪದಕ ಗೆದ್ದಿತು. ಒಟ್ಟಾರೆ, ಕರ್ನಾಟಕ ಬ್ಯಾಡ್ಮಿಂಟನ್‌ನಲ್ಲಿ 6 ಪದಕ ಗಳಿಸಿದೆ.
ಶ್ರೀಹರಿ ನಟರಾಜ್ ಮತ್ತು ಧಿನಿಧಿ ದೇಸಿಂಘು ಈ ಕೂಟದ ಶ್ರೇಷ್ಠ ಕ್ರೀಡಾಪಟುಗಳಾಗಿ ಆಯ್ಕೆಯಾಗಿದ್ದಾರೆ. ಶ್ರೀಹರಿ ಒಟ್ಟು 10 ಪದಕ ಮತ್ತು ಧಿನಿಧಿ 11 ಪದಕ ಗೆದ್ದಿದ್ದಾರೆ.
ರಾಜ್ಯಕ್ಕೆ ಇನ್ನಷ್ಟು ಪದಕಗಳ ನಿರೀಕ್ಷೆಯಿದ್ದು, ಕ್ರೀಡಾಕೂಟವು ಫೆಬ್ರವರಿ 14ರವರೆಗೆ ನಡೆಯಲಿದೆ.