ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಲು ಸ್ನೇಹಮಯಿ ಕೃಷ್ಣ (Snehamayi Krishna) ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠ ವಜಾಗೊಳಿಸಿತ್ತು. ಹೈಕೋರ್ಟ್ ತೀರ್ಪಿನ ಬಳಿಕ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತುವ ನಿರ್ಧಾರವನ್ನೂ ಅವರು ಪ್ರಕಟಿಸಿದ್ದರು. ಆದರೆ, ಇದೀಗ ಸುಪ್ರೀಂಗೆ ಮೇಲ್ಮನವಿ ಸಲ್ಲಿಸದೇ, ತಾವೇ ನ್ಯಾಯಾಲಯದಲ್ಲಿ ವಾದ ಮಂಡನೆ ಮಾಡುವುದಾಗಿ ನಿರ್ಧರಿಸಿದ್ದಾರೆ.
“ಹೈಕೋರ್ಟ್ ತೀರ್ಪಿನ ಆಧಾರದಲ್ಲಿ ಎರಡು ದಿನಗಳ ಚಿಂತನೆ ನಡೆಸಿ, ಸಾಕ್ಷ್ಯಗಳನ್ನು ಪರಿಶೀಲಿಸಿ, ವಕೀಲರ ಹಾಗೂ ಹಿತೈಷಿಗಳೊಂದಿಗೆ ಚರ್ಚಿಸಿ, ನನ್ನ ಅನುಭವದ ಮೇರೆಗೆ ನಿರ್ಧಾರ ತೆಗೆದುಕೊಂಡಿದ್ದೇನೆ. ಸುಪ್ರೀಂಕೋರ್ಟ್ ಮೇಲ್ಮನವಿ ಸಲ್ಲಿಸುವ ಬದಲು, ನನ್ನ ಬಳಿ ಇರುವ ಸಾಕ್ಷ್ಯಾಧಾರಗಳನ್ನು ಆಧರಿಸಿ ನಾನು ಕಾನೂನು ಹೋರಾಟ ಮುಂದುವರಿಸುತ್ತೇನೆ. ಲೋಕಾಯುಕ್ತ ವರದಿ ಸಲ್ಲಿಸಿದರೂ ನಾನು ಮಾಡಿರುವ ಆರೋಪಗಳ ಪ್ರಕಾರ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ನೀಡುತ್ತದೆ ಎಂಬ ವಿಶ್ವಾಸವಿದೆ. ವಕೀಲರ ಸಹಕಾರದೊಂದಿಗೆ, ಅಗತ್ಯವಿದ್ದರೆ ವಕೀಲರನ್ನು ನೇಮಕ ಮಾಡಿಕೊಂಡು, ಖುದ್ದಾಗಿ ವಾದ ಮಂಡನೆ ಮಾಡುತ್ತೇನೆ” ಎಂದು ಅವರು Facebookನಲ್ಲಿ ತಿಳಿಸಿದ್ದಾರೆ.
ಸ್ನೇಹಮಯಿ ಕೃಷ್ಣ ಮಾತನಾಡಿ, “ನಾನು ಈಗ ಮೇಲ್ಮನವಿ ಸಲ್ಲಿಸುವ ಬದಲು ಆರೋಪಿಗಳಿಗೆ ಶಿಕ್ಷೆ ಕೊಡಿಸುವತ್ತ ಗಮನ ಹರಿಸುತ್ತೇನೆ. ಜನರ ಅನುಮಾನಗಳು ನೀಗಬೇಕಾಗಿದೆ. ಸಿಎಂ ಪರ ಶಕ್ತಿಶಾಲಿ ವಕೀಲರು ಬಂದರೂ, ನಾನು ನನ್ನ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಸಿಬಿಐ ತನಿಖೆಗೆ ಹೋರಾಟ ಮಾಡುವ ಬದಲು, ನ್ಯಾಯಾಲಯದಲ್ಲಿ ಸಾಕ್ಷ್ಯಾಧಾರ ಒದಗಿಸಿ ಆರೋಪಿಗಳನ್ನು ಶಿಕ್ಷೆಗೊಳಪಡಿಸಲು ನಿರ್ಧರಿಸಿದ್ದೇನೆ. ಕೆಲವೇ ತಿಂಗಳಲ್ಲಿ ನ್ಯಾಯಾಲಯದಿಂದ ಸಮನ್ಸ್ ಹೊರಡಿಸುವಂತೆ ಮಾಡುತ್ತೇನೆ” ಎಂದು ಹೇಳಿದ್ದಾರೆ.