Bengaluru: ರಾಜ್ಯದಲ್ಲಿ BJP ಸರ್ಕಾರದ ಅವಧಿಯಲ್ಲಿ ನಡೆದಿದ್ದ COVID ಹಗರಣದ (Covid scam) ತನಿಖೆಯ ಹೊಣೆಯನ್ನು ಕಾಂಗ್ರೆಸ್ ಸರ್ಕಾರ ಸಿಐಡಿಗೆ ವಹಿಸಿದೆ. ಎಫ್ಐಆರ್ ದಾಖಲಾದ ಎರಡು ತಿಂಗಳ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಿಐಡಿ SP ರಾಘವೇಂದ್ರ ಹೆಗಡೆ ನೇತೃತ್ವದಲ್ಲಿ ಮೂವರು DySPಗಳನ್ನೊಳಗೊಂಡ ತಂಡ ಈ ಹಗರಣದ ತನಿಖೆ ನಡೆಸಲಿದೆ. ಡಿಸೆಂಬರ್ 13ರಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ. ಪಿಜಿ ಗಿರೀಶ್, ಲೆಕ್ಕಪತ್ರ ಇಲಾಖೆಯ ಜಂಟಿ ನಿಯಂತ್ರಕ ಜೆಪಿ ರಘು, ಕೆಲ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಇತರರ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಈ ಹಗರಣವು ಕರ್ನಾಟಕ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಡಾ ಹಗರಣ ಮತ್ತು ಇತರ ವ್ಯವಹಾರಗಳನ್ನು ಕೋರ್ಟ್ ಮಾಡುತ್ತಿತ್ತು. ಪ್ರಭಾವಿ ರಾಜಕಾರಣಿಗಳು ಮತ್ತು ಐಎಎಸ್ ಅಧಿಕಾರಿಗಳ ಹೆಸರು ಈ ಹಗರಣದಲ್ಲಿ ಪ್ರಸ್ತಾಪವಾಗಿರುವುದರಿಂದ, ವಿಶೇಷ ತನಿಖಾ ತಂಡ (SIT) ನೇತೃತ್ವಕ್ಕೆ ಐಪಿಎಸ್ ಅಧಿಕಾರಿಗಳು ಹಿಂಜರಿದ ಕಾರಣ, ಸರ್ಕಾರವು ಇದೀಗ ಸಿಐಡಿಗೆ ತನಿಖೆ ವಹಿಸಿದೆ.
ಕೋವಿಡ್ ಸಮಯದಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ 167 ಕೋಟಿ ರೂಪಾಯಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಎನ್ 95 ಮಾಸ್ಕ್, ಪಿಪಿಇ ಕಿಟ್ ಸೇರಿದಂತೆ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿಯೇ ಅವ್ಯವಹಾರ ನಡೆದಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಮುಖ್ಯ ಲೆಕ್ಕಾಧಿಕಾರಿ ಡಾ. ಎಂ. ವಿಷ್ಣು ಪ್ರಸಾದ್ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ.