New Delhi: ಮದುವೆ (Marriage) ವಿಫಲವಾದರೆ ಜೀವನದ ಅಂತ್ಯವಲ್ಲ, ಧೈರ್ಯದಿಂದ ಮುನ್ನುಗ್ಗಿ ಹೊಸ ಬದುಕು ರೂಪಿಸಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ಮಹತ್ವದ ಸಲಹೆ ನೀಡಿದೆ. ಪ್ರೀತಿಯ ಹುಟ್ಟುಕ್ಕೂ ಹಲವಾರು ಕಾರಣಗಳಿರುವಂತೆ, ಅದರ ಅಂತ್ಯಕ್ಕೂ ಅನೇಕ ಕಾರಣಗಳಿರುತ್ತವೆ. ಕೆಲವರು ಕಷ್ಟಗಳನ್ನು ಸಮಾಧಾನದಿಂದ ಎದುರಿಸಿ ಜೊತೆಯೇ ಉಳಿಯಲು ನಿರ್ಧಾರ ಮಾಡುತ್ತಾರೆ, ಮತ್ತೊಬ್ಬರು ದೂರಾಗಲು ಆಯ್ಕೆ ಮಾಡುತ್ತಾರೆ.
ಕೇವಲ ಅರೇಂಜ್ ಮದುವೆಗಳಲ್ಲ, ಪ್ರೀತಿಸಿ ಮದುವೆಯಾದ ಜೋಡಿಗಳೂ ವಿಚ್ಛೇದನದ ಹಂತಕ್ಕೆ ತಲುಪುತ್ತಾರೆ. ಮದುವೆ ವಿಫಲವಾದರೆ ಬದುಕು ಮುಗಿದಂತೆಯೇ ಎಂದು ಭಾವಿಸಬಾರದು, ಬದಲಾಗಿ ಧೈರ್ಯದಿಂದ ಮುಂದುವರೆಯಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ನ್ಯಾಯಮೂರ್ತಿ ಅಭಯ್ ಓಕಾ ನೇತೃತ್ವದ ಪೀಠವು 2020 ರ ಮೇ ತಿಂಗಳಲ್ಲಿ ನಡೆದ ವಿವಾಹವನ್ನು ರದ್ದುಪಡಿಸಿ, ದಂಪತಿಯ ನಡುವಿನ ಎಲ್ಲಾ 17 ಕಾನೂನು ಪ್ರಕ್ರಿಯೆಗಳನ್ನೂ ಮುಕ್ತಾಯಗೊಳಿಸಿ, ಮುಂದುವರೆಯಲು ಸಲಹೆ ನೀಡಿದೆ. ಇಬ್ಬರೂ ಚಿಕ್ಕ ವಯಸ್ಸಿನವರಾಗಿರುವುದರಿಂದ, ತಮ್ಮ ಭವಿಷ್ಯದ ಬಗ್ಗೆ ಆಲೋಚಿಸಿ, ಹೊಸ ಜೀವನ ಆರಂಭಿಸಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಮದುವೆಯಾದ ಒಂದು ವರ್ಷದೊಳಗೆ ಪತ್ನಿ ಪತಿ ಹಾಗೂ ಅತ್ತೆ-ಮಾವರಿಂದ ಕಿರುಕುಳ ಅನುಭವಿಸಿ ಗಂಡನ ಮನೆಯಿಂದ ಬೇರ್ಪಡಬೇಕಾದ ಪರಿಸ್ಥಿತಿ ಎದುರಾದ್ದು, ಇದು ಕೂಡಾ ಅಂತಹ ದುರದೃಷ್ಟಕರ ಪ್ರಕರಣಗಳಲ್ಲಿ ಒಂದಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ವಕೀಲರು ಸುಪ್ರೀಂ ಕೋರ್ಟ್‌ಗೆ, ಭಾರತದ ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ಈ ವಿವಾಹವನ್ನು ರದ್ದುಪಡಿಸಲು ಮನವಿ ಮಾಡಿದ್ದರು. 2020ರಲ್ಲಿ ಮದುವೆಯಾದ ನಂತರವೇ ದಂಪತಿಯ ಸಂಬಂಧ ಹದಗೆಟ್ಟು, ಮಹಿಳೆ ತನ್ನ ಹೆತ್ತವರ ಮನೆಯಲ್ಲಿ ವಾಸಿಸಲು ನಿರ್ಧರಿಸಿದ್ದಾಳೆ ಎಂದು ಕೋರ್ಟ್ ಗಮನಕ್ಕೆ ತಂದರು.