ಬಳ್ಳಾರಿ: ಬಜೆಟ್ ನಂತರ ನಂದಿನಿ ಹಾಲಿನ (Nandini milk) ದರ 5 ರೂ. ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಸುದ್ದಿ ಹಿನ್ನಲೆಯಲ್ಲಿ KMF ಅಧ್ಯಕ್ಷ ಭೀಮಾನಾಯ್ಕ್ (KMF President Bhimanaik) ಸ್ಪಷ್ಟನೆ ನೀಡಿದ್ದಾರೆ. ಸರ್ಕಾರ ಈ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ.
ಭೀಮಾನಾಯ್ಕ್, ನಂದಿನಿ ಹಾಲಿನ ದರ ಹೆಚ್ಚಳ ಕುರಿತು ಒತ್ತಡ ಇದೆ ಎಂದು ಹೇಳಿದರು. ಈ ಸಂಬಂಧ ನಿಗಮಗಳ ಸಭೆ ನಡೆಸಿ ಚರ್ಚೆ ಮಾಡಲಾಗಿದ್ದು, ಹೆಚ್ಚಿದ ದರವನ್ನು ರೈತರಿಗೆ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ನೀಡಲಾಗಿದೆ, ಆದರೆ ಇನ್ನೂ ಅಧಿಕೃತ ನಿರ್ಧಾರ ಬಂದಿಲ್ಲ ಎಂದರು.
ಹಾಲಿನ ದರ ಹೆಚ್ಚಿಸಲು ರಾಜ್ಯ ಸರ್ಕಾರದ ಮೇಲೆ ಹಾಲು ಒಕ್ಕೂಟಗಳು ಒತ್ತಡ ಹೇರುತ್ತಿದ್ದು, ಲೀಟರ್‌ಗೆ 5 ರೂಪಾಯಿ ಹೆಚ್ಚಳ ಮಾಡಬೇಕು ಎಂಬ ಬೇಡಿಕೆ ಇಟ್ಟಿವೆ. ಪಶುಸಂಗೋಪನೆ ಸಚಿವರು ಹಾಗೂ ಕೆಎಂಎಫ್ ಅಧಿಕಾರಿಗಳ ಸಭೆಯಲ್ಲೂ ಈ ಕುರಿತು ಚರ್ಚೆ ನಡೆಸಲಾಗಿದೆ. ಮೂಲಗಳ ಪ್ರಕಾರ, ಬೆಲೆ ಹೆಚ್ಚಳ ಅನಿವಾರ್ಯವಾಗಿದೆ ಎಂದು ಒಕ್ಕೂಟಗಳು ಹೇಳಿದ್ದಾರೆ.
2023 ಡಿಸೆಂಬರ್ ನಲ್ಲಿಯೇ ರೈತರು ಹಾಗೂ ಹಾಲು ಒಕ್ಕೂಟಗಳು ನಂದಿನಿ ಹಾಲಿನ ದರ 5 ರೂ. ಹೆಚ್ಚಿಸಲು ಮನವಿ ಮಾಡಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಭೀಮಾನಾಯ್ಕ್ ಸ್ಪಷ್ಟಪಡಿಸಿದ್ದರು.