Bengaluru: ಕರ್ನಾಟಕ ಅರಣ್ಯ ಇಲಾಖೆಯ 150 ಕೋಟಿ ರೂಪಾಯಿಗಳಿಗೆ ಮಿಗಿಲಾದ ಮೌಲ್ಯದ ಭೂಮಿಯನ್ನು ಅಕ್ರಮವಾಗಿ ಸ್ವಾಧೀನದಲ್ಲಿರಿಸಿಕೊಂಡ ಆರೋಪದ ಮೇಲೆ ಕಾಂಗ್ರೆಸ್ ನ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ (Sam Pitroda) ಸೇರಿದಂತೆ ಆರು ಮಂದಿಯ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.
ಸ್ಯಾಮ್ ಪಿತ್ರೋಡಾ, ಮಾಜಿ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ಆರ್.ಕೆ. ಸಿಂಗ್ ಮತ್ತು ಸಂಜಯ್ ಮೋಹನ್, ಬೆಂಗಳೂರು ನಗರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಎನ್. ರವೀಂದ್ರ ಕುಮಾರ್ ಮತ್ತು ಎಸ್.ಎಸ್. ರವಿಶಂಕರ್ ವಿರುದ್ಧ ದೂರು ದಾಖಲಾಗಿದೆ. ಬಿಜೆಪಿ ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್ ಅವರು ಈ ದೂರು ಸಲ್ಲಿಸಿದ್ದಾರೆ.
ಬೆಂಗಳೂರು ಯಲಹಂಕದ ಜಾರಕಬಂಡೆ ಮೀಸಲು ಅರಣ್ಯ ಪ್ರದೇಶದ 12.35 ಎಕರೆ ಭೂಮಿಯನ್ನು 2001ರಲ್ಲಿ ಪಿತ್ರೋಡಾಗೆ 10 ವರ್ಷಗಳ ಗುತ್ತಿಗೆ ನೀಡಲಾಗಿತ್ತು. ಆದರೆ, 2011ರಲ್ಲಿ ಗುತ್ತಿಗೆ ಅವಧಿ ಮುಕ್ತಾಯವಾದರೂ, ಅವರು ಭೂಮಿಯನ್ನು ತೆರವು ಮಾಡಿಲ್ಲ ಎಂದು ರಮೇಶ್ ಆರೋಪಿಸಿದ್ದಾರೆ.
ಈ ಭೂಮಿಯಲ್ಲಿ ಬೆಳೆದ ಔಷಧೀಯ ಗಿಡಗಳಿಂದ ಪಿತ್ರೋಡಾಗೆ ವಾರ್ಷಿಕ ಕೋಟ್ಯಂತರ ರೂಪಾಯಿ ಆದಾಯ ಬರುತ್ತದೆ ಎಂದು ಹೇಳಲಾಗಿದೆ. ಪ್ರಸ್ತುತ ಈ ಭೂಮಿಯ ಮಾರುಕಟ್ಟೆ ಮೌಲ್ಯ 400 ಕೋಟಿ ರೂಪಾಯಿಗಳಷ್ಟಿದೆ.
ಸ್ಯಾಮ್ ಪಿತ್ರೋಡಾ 1991ರಲ್ಲಿ “Foundation for Revitalisation of Local Health Traditions” (FRLHT) ಎಂಬ ಸಂಸ್ಥೆ ನೋಂದಣಿ ಮಾಡಿಸಿದ್ದರು. 2010ರಲ್ಲಿ ಇದರ ನೋಂದಣಿ ರದ್ದುಗೊಂಡಿತು. 1996ರಲ್ಲಿ ಈ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು, ಆದರೆ 2011 ನಂತರ ಗುತ್ತಿಗೆ ನವೀಕರಣವಾಗಿಲ್ಲ.
ಗುತ್ತಿಗೆ ಅವಧಿ ಮುಕ್ತಾಯವಾದರೂ 150 ಕೋಟಿ ಮೌಲ್ಯದ ಈ ಭೂಮಿಯನ್ನು ರಾಜ್ಯ ಅರಣ್ಯ ಇಲಾಖೆ ವಶಕ್ಕೆ ತೆಗೆದುಕೊಳ್ಳಲಿಲ್ಲ ಎಂದು ಎನ್.ಆರ್. ರಮೇಶ್ ದೂರಿನಲ್ಲಿ ಹೇಳಿದ್ದಾರೆ.