Gadag: ಪ್ರಧಾನಿ ನರೇಂದ್ರ ಮೋದಿಯವರ (Prime Minister Modi) ಮೆಚ್ಚುಗೆ ಪಡೆದಿದ್ದ ಕಲಾಪೋಷಕ ಕಾಳಮಂಜಿ ವೆಂಕಟಗಿರಿ ಶ್ರೀನಿವಾಸ್ (ಕಾವೆಂಶ್ರೀ, Kavemsree) ನಿಧನರಾಗಿದ್ದಾರೆ. ಅವರು ಆರೋಗ್ಯ ಸಮಸ್ಯೆಯಿಂದಾಗಿ ಗದಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಮಧ್ಯಾಹ್ನ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದರು.
2023ರಲ್ಲಿ ನಡೆದ 96ನೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಕಾವೆಂಶ್ರೀ ಅವರ ಸೇವೆಯನ್ನು ಪ್ರಶಂಸಿಸಿದ್ದರು. ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಲು ಅವರು 1996ರಲ್ಲಿ ಕಲಾ ಚೇತನ ಸಂಸ್ಥೆ ಸ್ಥಾಪಿಸಿದ್ದರು. ಈ ಸಂಸ್ಥೆಯ ಮೂಲಕ ಅವರು ಅಂತರಾಷ್ಟ್ರೀಯ ಕಲಾವಿದರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.
ಶಿವಮೊಗ್ಗ ಜಿಲ್ಲೆಯ ಕಾಳಮಂಜಿ ಮೂಲದ ಕಾವೆಂಶ್ರೀ 34 ವರ್ಷಗಳಿಂದ ಗದಗದಲ್ಲಿ ವಾಸವಾಗಿದ್ದರು. ಕಲೆ ಮತ್ತು ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಅವರು ಹಲವಾರು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದಿದ್ದರು. ಜೊತೆಗೆ, ಅವರು ಹೋಟೆಲ್ ಉದ್ಯಮದಲ್ಲೂ ತೊಡಗಿದ್ದರು.
ಫಲಾಪೇಕ್ಷೆಯಿಲ್ಲದೆ ಕಲಾಸೇವೆ ನಡೆಸುತ್ತಿದ್ದ ಕಾವೆಂಶ್ರೀ ಅವರ ಕಲಾ ಚೇತನ ಸಾಂಸ್ಕೃತಿಕ ಅಕಾಡೆಮಿ 25 ವರ್ಷಗಳನ್ನು ಪೂರೈಸಿದೆ. ಅವರ ಸೇವೆಯನ್ನು ಗುರುತಿಸಿ ಹಲವಾರು ಸಂಘಟನೆಗಳು ಹಾಗೂ ಗದುಗಿನ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಸನ್ಮಾನಿಸಿದ್ದರು.
2023ರ ಡಿಸೆಂಬರ್ ತಿಂಗಳಲ್ಲಿ ಪ್ರಸಾರವಾದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಕಾವೆಂಶ್ರೀ ಅವರ ಸೇವೆಯನ್ನು ಶ್ಲಾಘಿಸಿದ್ದರು. “ಕರ್ನಾಟಕದ ಕಲಾ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲು ಅವರು 25 ವರ್ಷಗಳ ಹಿಂದಿನಿಂದ ತಪಸ್ಸಿನಂತೆ ಕಾರ್ಯನಿರ್ವಹಿಸುತ್ತಿದ್ದಾರೆ” ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.