Port Vila (Vanuatu): ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ (Lalit Modi) ಇತ್ತೀಚೆಗೆ ವನವಾಟು ದೇಶದ ಪೌರತ್ವ ಪಡೆದಿದ್ದರು ಎಂಬ ಸುದ್ದಿ ಹಬ್ಬಿತ್ತು. ಆದರೆ ಈಗ ಈ ಸಂಬಂಧ ಅವರಿಗೆ ಸಮಸ್ಯೆ ಎದುರಾಗಿದೆ.
ವನವಾಟು ಪ್ರಧಾನಿ ಜೊಥಮ್ ನಪಟ್, ಲಲಿತ್ ಮೋದಿಗೆ ನೀಡಿರುವ ಪಾಸ್‌ಪೋರ್ಟ್ ಅರ್ಜಿಯನ್ನು ರದ್ದುಗೊಳಿಸುವಂತೆ ದೇಶದ ಪೌರತ್ವ ಆಯುಕ್ತರಿಗೆ ಆದೇಶ ನೀಡಿದ್ದಾರೆ. ಲಲಿತ್ ಮೋದಿ, ಭಾರತಕ್ಕೆ ಹಸ್ತಾಂತರವಾಗುವುದನ್ನು ತಪ್ಪಿಸಲು ವನವಾಟುಗೆ ತೆರಳಿದ್ದಾರೆ ಎಂಬ ಮಾಹಿತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪ್ರಧಾನಿ ಕಚೇರಿಯ ಪ್ರಕಾರ, ಇಂಟರ್ಪೋಲ್ ಲಲಿತ್ ಮೋದಿಗೆ ಎಚ್ಚರಿಕೆ ನೋಟಿಸ್ ನೀಡುವ ಮನವಿಯನ್ನು ಎರಡು ಬಾರಿ ತಿರಸ್ಕರಿಸಿದೆ. ಹಿನ್ನಲೆ ಪರಿಶೀಲನೆಯ ವೇಳೆ ಯಾವುದೇ ಅಪರಾಧದ ದಾಖಲೆಯೂ ಪತ್ತೆಯಾಗಿಲ್ಲ. ಆದರೂ, ಅವರ ಪೌರತ್ವ ಅರ್ಜಿಯನ್ನು ರದ್ದು ಮಾಡಲು ಸೂಚಿಸಲಾಗಿದೆ.
ಲಲಿತ್ ಮೋದಿ ಹಿಂದೊಮ್ಮೆ ಬಿಸಿಸಿಐನ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರ ವಿರುದ್ಧ ಮನಿ ಲಾಂಡರಿಂಗ್, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (1999) ಉಲ್ಲಂಘನೆ ಸೇರಿದಂತೆ ಹಲವು ಆರ್ಥಿಕ ಅಪರಾಧಗಳ ಆರೋಪಗಳಿವೆ. ಈ ಆರೋಪಗಳ ವಿಚಾರಣೆಯ ನಡುವೆ 2010ರಲ್ಲಿ ಅವರು ಭಾರತ ತೊರೆದಿದ್ದರು.
ಮಾರ್ಚ್ 7ರಂದು ಲಲಿತ್ ಮೋದಿ ವನವಾಟು ಪೌರತ್ವ ಪಡೆದಿದ್ದಾರೆ ಎಂಬ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ಗೆ ಅವರು ತಮ್ಮ ಪಾಸ್‌ಪೋರ್ಟ್ ಮರಳಿಸಿರುವುದಾಗಿ ತಿಳಿಸಿದ್ದಾರೆ. ಅವರ ವಿರುದ್ಧದ ಕಾನೂನು ಪ್ರಕರಣಗಳು ಮುಂದುವರಿಯುತ್ತವೆ ಎಂದು ಅವರು ಹೇಳಿದ್ದಾರೆ.
ಮಾರ್ಚ್ 8ರಂದು ಎಕ್ಸ್ (ಹಳೆಯ ಟ್ವಿಟ್ಟರ್) ಜಾಲತಾಣದಲ್ಲಿ ಲಲಿತ್ ಮೋದಿ, “ಭಾರತೀಯ ನ್ಯಾಯಾಲಯದಲ್ಲಿ ನನ್ನ ವಿರುದ್ಧ ಯಾವುದೇ ಪ್ರಕರಣ ಬಾಕಿ ಉಳಿದಿಲ್ಲ. ಇದು ಕೇವಲ ಮಾಧ್ಯಮಗಳ ಊಹಾಪೋಹ. 15 ವರ್ಷಗಳ ಬಳಿಕವೂ ನನ್ನ ಕುರಿತಾಗಿ ಸುಳ್ಳು ಪ್ರಕರಣಗಳನ್ನು ಮಾತ್ರ ಉಲ್ಲೇಖಿಸುತ್ತಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ.
ಸದ್ಯ ಲಂಡನ್ ನಲ್ಲಿ ನೆಲೆಸಿರುವ ಲಲಿತ್ ಮೋದಿ, ವನವಾಟು ಪೌರತ್ವಕ್ಕಾಗಿ ಭಾರತೀಯ ಪಾಸ್‌ಪೋರ್ಟ್ ಮರಳಿಸಲು ಅರ್ಜಿ ಸಲ್ಲಿಸಿದ್ದಾರೆ.