Chikkaballapur: ಬೇಸಿಗೆ ಆರಂಭವಾಗುತ್ತಿದ್ದಂತೆ ಸೂರ್ಯನ ಕಠಿಣ ಶಾಖಕ್ಕೆ ಜನತೆ ತತ್ತರಿಸುತ್ತಿದ್ದಾರೆ. ತಾಪಮಾನ (temperature) 36-38 ಡಿಗ್ರಿ ಸೆಲ್ಸಿಯಸ್ ವರೆಗೆ ಹೆಚ್ಚಾಗಿದ್ದು, ಇದರಿಂದ ಮಕ್ಕಳಲ್ಲಿ, ಗರ್ಭಿಣಿಯರಲ್ಲ ಹಾಗೂ ವೃದ್ದರಲ್ಲಿ ವಾಂತಿ, ಬೇದಿ, ಜ್ವರ, ಜಾಂಡೀಸ್ ಮುಂತಾದ ಸಮಸ್ಯೆಗಳು ಹೆಚ್ಚಾಗಿವೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿದ ಪರಿಣಾಮ ಜನಜಂಗುಳಿ ಉಂಟಾಗಿದೆ.
ಮಕ್ಕಳು, ಗರ್ಭಿಣಿಯರು ಹಾಗೂ ವೃದ್ದರು ಹೆಚ್ಚು ನೀರು ಸೇವಿಸುವುದು, ಪೋಷಕಾಂಶಯುಕ್ತ ಆಹಾರ ಸೇವಿಸುವುದು, ಬಿಸಿಲಿನಿಂದ ರಕ್ಷಣೆ ಪಡೆಯುವುದು ಅಗತ್ಯವಿದೆ ಎಂದು ಮಕ್ಕಳ ತಜ್ಞ ಡಾ. ರವಿಕುಮಾರ್ ಸಲಹೆ ನೀಡಿದ್ದಾರೆ.
ಮಂಡ್ಯದಲ್ಲೂ ಬಿಸಿಲಿನ ತೀವ್ರತೆ ಹೆಚ್ಚಳ
ಮಂಡ್ಯ ಜಿಲ್ಲೆಯಲ್ಲಿ ಮಧ್ಯಾಹ್ನ ವೇಳೆ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಜನರು ಮನೆಯಿಂದ ಹೊರಬರುವುದಕ್ಕೂ ಕಷ್ಟವಾಗುತ್ತಿದೆ. ದೇಹದ ತಾಪಮಾನ ಕಡಿಮೆ ಮಾಡಲು ಜನರು ಕಲ್ಲಂಗಡಿ ಹಣ್ಣು, ಜ್ಯೂಸ್, ಎಳನೀರು, ಐಸ್ ಕ್ರೀಂ ಸೇವನೆ ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿದ್ದು, ಆದರೆ ಈ ಬಾರಿ ಮಾರ್ಚ್ ನಲ್ಲಿಯೇ ತಾಪಮಾನ ಏರಿಕೆಯಾಗಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಏಪ್ರಿಲ್ ಹಾಗೂ ಮೇ ತಿಂಗಳುಗಳಲ್ಲಿ ಪರಿಸ್ಥಿತಿ ಇನ್ನಷ್ಟು ಕಠಿಣವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.