Bengaluru: ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ (Rudrappa Lamani) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ನಿನ್ನೆ (ಮಾರ್ಚ್ 14) ಬಜೆಟ್ ಅಧಿವೇಶನ ಮುಗಿಸಿಕೊಂಡು ಬೆಂಗಳೂರುದಿಂದ ಹಾವೇರಿಗೆ ತೆರಳುತ್ತಿದ್ದ ವೇಳೆ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜೆ.ಜೆ.ಹಳ್ಳಿ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಎಳ್ಳನೀರು ಕುಡಿಯಲು ಕಾರು ನಿಲ್ಲಿಸಿದ್ದಾಗ, ವೇಗವಾಗಿ ಬಂದ ಬೈಕ್ ರುದ್ರಪ್ಪ ಲಮಾಣಿ ಅವರಿಗೆ ಗುದ್ದಿದ್ದು, ತೀವ್ರ ಗಾಯಗಳಾಗಿವೆ.
ಅಪಘಾತದ ಬಳಿಕ ಅವರನ್ನು ಹಿರಿಯೂರಿನ ಆಸ್ಪತ್ರೆಗೆ, ನಂತರ ದಾವಣಗೆರೆಯ S.S. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಐಸಿಯು ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು (ಮಾರ್ಚ್ 15) ಬೆಳಗ್ಗೆ ಅಚಾನಕ್ ಅವರನ್ನು ಬೆಂಗಳೂರು ಅಪೋಲೋ ಆಸ್ಪತ್ರೆಗೆ ವರ್ಗಾಯಿಸಲಾಗಿದೆ.
ನಿನ್ನೆ ರಾತ್ರಿ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದ್ದರೂ, ದಿಢೀರ್ ಬೆಂಗಳೂರು ಶಿಫ್ಟ್ ಮಾಡಿರುವುದರಿಂದ ಬೆಂಬಲಿಗರು ಆತಂಕಗೊಂಡಿದ್ದಾರೆ. ಲಮಾಣಿ ಅವರ ಆರೋಗ್ಯದ ಸ್ಥಿತಿ ಬಗ್ಗೆ ಕುಟುಂಬಸ್ಥರು ಅಥವಾ ವೈದ್ಯರು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.