Chikkamagaluru: ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತ (Chandradrona mountain) ಶ್ರೇಣಿಯಲ್ಲಿ ಇರುವ ಶ್ರೀ ಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ (ದತ್ತಪೀಠ)ದಲ್ಲಿ ಮಾರ್ಚ್ 15 ರಿಂದ 17ರವರೆಗೆ ಉರುಸ್ ಆಚರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈ ಮೂರು ದಿನಗಳ ಕಾಲ ಪ್ರವಾಸಿಗರಿಗೆ ಈ ಪ್ರದೇಶಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಉರುಸ್ ಸಂದರ್ಭದಲ್ಲಿ ರಾಜ್ಯ ಹಾಗೂ ಇತರ ರಾಜ್ಯಗಳಿಂದ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ. ಭದ್ರತೆಗಾಗಿ ಒಂದು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದ್ದು, ಶ್ರೀ ದತ್ತಪೀಠದ ಸುತ್ತಮುತ್ತ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.
ಶಾಖಾದ್ರಿ ಕುಟುಂಬವು ಉರುಸ್ ತಮ್ಮ ನೇತೃತ್ವದಲ್ಲಿ ನಡೆಯಬೇಕೆಂದು ಒತ್ತಾಯಿಸಿದೆ. ಅವರು ವಿವಾದಿತ ಗುಹೆಯೊಳಗಿನ ಗೋರಿಗಳಿಗೆ ಗಂಧ ಲೇಪನೆ ಮಾಡಲು ಅವಕಾಶ ಕೇಳಿದ್ದಾರೆ. ಆದರೆ, ಜಿಲ್ಲಾಡಳಿತ ಈ ಸಂಬಂಧ ಅನುಮತಿ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಶಾಖಾದ್ರಿ ಕುಟುಂಬ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.