Amritsar: ಅಮೃತಸರದ ಗೋಲ್ಡನ್ ಟೆಂಪಲ್ (Golden Temple) ಆವರಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕಬ್ಬಿಣದ ರಾಡ್‌ನಿಂದ ಭಕ್ತರ ಮೇಲೆ ದಾಳಿ ನಡೆಸಿದ್ದು, ಐದು ಜನರು ಗಾಯಗೊಂಡಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದೆ.
ಶಿರೋಮಣಿ ಗುರುದ್ವಾರ ಪ್ರಬಂಧಕ್ ಸಮಿತಿ (SGPC) ಭಕ್ತರು ಮತ್ತು ನೌಕರರ ಮೇಲೆ ಹರಿಯಾಣದ ವ್ಯಕ್ತಿಯೊಬ್ಬ ಕಬ್ಬಿಣದ ರಾಡ್‌ನಿಂದ ದಾಳಿ ಮಾಡಿದ್ದಾನೆ. ಈ ಘಟನೆ ಗೋಲ್ಡನ್ ಟೆಂಪಲ್ ಸಮುದಾಯ ಅಡುಗೆಮನೆಯ ಬಳಿ ಇರುವ ಐತಿಹಾಸಿಕ ಗುರು ರಾಮ್ ದಾಸ್ ಸೆರೈನಲ್ಲಿ ನಡೆದಿದೆ.
ಶ್ರೀ ಹರ್ಮಂದಿರ್ ಸಾಹಿಬ್ ಆವರಣದಲ್ಲಿ ನಡೆದ ಈ ದಾಳಿಯಲ್ಲಿ ಭಟಿಂಡಾದ ಸಿಖ್ ಯುವಕನಿಗೆ ತೀವ್ರ ಗಾಯಗಳಾಗಿದ್ದು, ಅಮೃತಸರದ ಶ್ರೀ ಗುರು ರಾಮದಾಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
SGPC ಸಿಬ್ಬಂದಿಯು ಹಲ್ಲೆ ಮಾಡಿದ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಹರಿಯಾಣ ನಿವಾಸಿ ಜುಲ್ಫಾನ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಆತ ಮಾನಸಿಕ ಸಮಸ್ಯೆ ಹೊಂದಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳೀಯ ಪೊಲೀಸರು ಮತ್ತು SGPC ಜಂಟಿಯಾಗಿ ಈ ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.