ನಾಳೆ ನಡೆಯಲಿರುವ ಕರ್ನಾಟಕ ಬಂದ್ (Karnataka Bandh) ಹಿನ್ನೆಲೆ, ಪೊಲೀಸ್ ಇಲಾಖೆ ಬಂದ್ ಬೆಂಬಲಿಸಿದ ಸಂಘಟನೆಗಳಿಗೆ ನೋಟಿಸ್ ನೀಡಿದೆ. ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ, ಪ್ರತಿಭಟನೆ, ಮುಷ್ಕರ, ಮೆರವಣಿಗೆ ನಿಷೇಧಿಸಲಾಗಿದೆ.
ಎಸ್.ಜೆ. ಪಾರ್ಕ್ ಪೊಲೀಸ್ ಠಾಣೆಯಿಂದ ನೋಟಿಸ್ ನೀಡಲಾಗಿದ್ದು, ಯಾರಾದರೂ ಪ್ರತಿಭಟನೆ ಅಥವಾ ಮೆರವಣಿಗೆ ನಡೆಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ.
ಈ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್, ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ ವಿರುದ್ಧ ಕಿಡಿಕಾರಿದ್ದಾರೆ. “ಅವರಿಗೆ ದಯೆಯೂ ಇಲ್ಲ, ಆನಂದವೂ ಇಲ್ಲ!” ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ವಾಟಾಳ್ ನಾಗರಾಜ್ ತಮಾಷೆಯಾಗಿ ಪ್ರತಿಕ್ರಿಯೆ ನೀಡುತ್ತಾ, “ನಾನು ಸ್ವಲ್ಪ ಯಾಮಾರಿದೆ, ನಾನೂ ಸಿಎಂ ಆಗಬೇಕಿತ್ತು. ಆಗ ಇವರೆಲ್ಲಾ ನನ್ನ ಹಿಂದೆ ಬಂದಿರೋದು!” ಎಂದು ಹೇಳಿದ್ದಾರೆ. ಅಲ್ಲದೆ, ದಯಾನಂದ ಅವರನ್ನು ಭೇಟಿ ಮಾಡಿದ ಅನುಭವವನ್ನು ಹಂಚಿಕೊಂಡು, “ನಾವು ಒಂದೊಂದು ತುದಿಯಲ್ಲಿ ಕೂತಿದ್ದೆವು, ಮಾತಿಲ್ಲ, ಕತೆಯೂ ಇಲ್ಲ!” ಎಂದು ವ್ಯಂಗ್ಯವಾಡಿದ್ದಾರೆ.